ಕುಮಟಾ: ಪಕ್ಷ ನಂಬಿ ಕೆಟ್ಟೆವು. ಪಕ್ಷಕ್ಕಾಗಿ ದುಡಿದ ನನಗೆ ಟಿಕೆಟ್ ತಪ್ಪಿಸಿ ತುಂಬಾ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಶಾಸಕಿ, ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಶಾರದಾ ಶೆಟ್ಟಿ ದುಃಖಿತರಾಗಿ ನುಡಿದಿದ್ದಾರೆ.
ಕಳೆದ 25 ವರ್ಷಗಳಿಂದ ನಮ್ಮ ಯಜಮಾನರು (ಮೋಹನ್ ಶೆಟ್ಟಿ), ಅವರ ಬಳಿಕ ನಾನು, ಮಕ್ಕಳೆಲ್ಲ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ್ದೆವು. ನಾನು ಒಮ್ಮೆ ಶಾಸಕಿಯಾಗಿದ್ದೆ. ಆದರೆ ಕಳೆದ ಚುನಾವಣೆಯಲ್ಲಿ ಸೋತಿದ್ದೆ. ಐದು ವರ್ಷಅಧಿಕಾರ ಅನುಭವಿಸಿದೆ ಎಂದು ಸುಮ್ಮನೆ ಕೂರದೆ ಸೋತ ಐದು ವರ್ಷಗಳ ಕಾಲ ಪಕ್ಷ ಸಂಘಟನೆಗಾಗಿ, ಕಾರ್ಯಚಟುವಟಿಕೆಗಳಿಗಾಗಿ ದುಡಿದಿದ್ದೆ. ಕಾಂಗ್ರೆಸ್ ಗೆ ಗೆಲುವಿನ ವೇದಿಕೆ ಕಟ್ಟಿಕೊಟ್ಟಿದ್ದೆ. ಹೀಗಾಗಿ ನನಗೆ ನಂಬಿಕೆ ಇತ್ತು ನನಗೆ ಪಕ್ಷ ಟಿಕೆಟ್ ಕೊಡುತ್ತದೆ ಎಂದು. ಆದರೆ ಆ ನಂಬಿಕೆ ಹುಸಿಯಾಗಿದ್ದು, ತುಂಬಾ ದುಃಖವಾಗಿದೆ ಎಂದಿದ್ದಾರೆ.
ಶಾರದಾ ಶೆಟ್ಟರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಗೆದ್ದು ಬರುತ್ತಾರೆಂಬ ಅಲೆ ಕುಮಟಾ ಕ್ಷೇತ್ರದಲ್ಲಿ ಇತ್ತು. ಆದರೆ ಹೈಲೆವೆಲ್ ನಲ್ಲೆ ಕುತಂತ್ರ ನಡೆದು ಟಿಕೆಟ್ ಕೈ ತಪ್ಪಿದೆ. ಬಹಳಷ್ಟು ದಿನಗಳಿಂದ ಈ ಕುತಂತ್ರ ನಡೆಯುತ್ತಿತ್ತು. ಆದರೆ ಈ ಬಾರಿ ಕೊನೆಯ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದೆ ಎಂದು ಅವರು ಹೇಳಿದ್ದಾರೆ. ನಮ್ಮ ನಾಯಕರನ್ನ ಭೇಟಿಯಾದಾಗ ನನಗೆ ಭರವಸೆ ಇತ್ತು. ಇತ್ತೀಚಿನ ದಿನಗಳವರೆಗೆ ನಾಯಕರುಗಳು ಕೈಬಿಡಲ್ಲ ಎಂಬ ನಂಬಿಕೆಯಲ್ಲಿದ್ದೆ. ಕುಮಟಾದಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಜನರು ಕೂಡ ಕಾಂಗ್ರೆಸ್ ಕಡೆ ಒಲವು ತೋರಿದ್ದರು. ಆದರೆ ಪಕ್ಷ ನಂಬಿ ಕೆಟ್ಟೆವು ಎನಿಸುತ್ತಿದೆ. ಈಗ ಟಿಕೆಟ್ ಘೋಷಣೆಯಾಗಿದೆ. ಮುಂದೇನೂ ಮಾಡಲು ಆಗುವುದಿಲ್ಲ. ಮಹಿಳೆಯಾಗಿ ನನಗೆ ಅವಕಾಶ ನೀಡಬೇಕಿತ್ತು ಎಂದ ಅವರು, ಎರಡು ದಿನಗಳ ಬಳಿಕ ಕಾರ್ಯಕರ್ತರ ಸಭೆ ನಡೆಸಿ, ಅವರ ಸೂಚನೆಯಂತೆ ನಡೆಯುತ್ತೇನೆ ಎಂದು ತಿಳಿಸಿದ್ದಾರೆ.