ಅಂಕೋಲಾ: ತಾಲೂಕಿನ ಬಾವಿಕೇರಿಯಲ್ಲಿ ಮಹಿಳೆಗೆ ಆಟೋರಿಕ್ಷಾ ಡಿಕ್ಕಿಯಾಗಿ ಮೃತಪಟ್ಟ ಪ್ರಕರಣ ಕುರಿತು ಅಪಘಾತಪಡಿಸಿದ ಆಟೋ ಚಾಲಕನ್ನು ಬಂಧಿಸಿ, ಕಾನೂನು ಬಾಹಿರವಾಗಿ ರಿಕ್ಷಾ ಚಾಲನೆ ಮಾಡುವುದನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ತಹಶೀಲ್ದಾರರು ಮತ್ತು ಸಿಪಿಐರವರಿಗೆ ಮನವಿ ಸಲ್ಲಿಸಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ ಗ್ರಾಮಸ್ಥರು, ಅಮಾಯಕ ಮಹಿಳೆಯ ಸಾವಿಗೆ ಆಟೋರಿಕ್ಷಾ ಕಾರಣವಾಗಿದ್ದು, ಈ ದಾರಿಯಲ್ಲಿ ಸಂಚರಿಸುವ ಎಲ್ಲ ಆಟೋರಿಕ್ಷಾಗಳನ್ನು ಆರ್.ಟಿ.ಓ ಮುಖಾಂತರ ಪರೀಕ್ಷೆಗೊಳಪಡಿಸಿ ನಿಯಮಬಾಹಿರ ಓಡಾಡುವ ರಿಕ್ಷಾಗಳನ್ನು ನಿರ್ಬಂಧಿಸಬೇಕೆOದು ಆಗ್ರಹಿಸಿದರು.
ಗ್ರಾಮಸ್ಥರ ಪರವಾಗಿ ಗ್ರಾ.ಪಂ.ಸದಸ್ಯ ಉದಯ ನಾಯಕ ಮಾತನಾಡಿ, ಅಂಕೋಲಾದಿ0ದ ಬೇಲೆಕೇರಿ ಮಾರ್ಗದಲ್ಲಿ ಸಂಚರಿಸುವ ರಿಕ್ಷಾಗಳಲ್ಲಿ ಬಹುತೇಕ ರಿಕ್ಷಾಗಳಿಗೆ ಪರ್ಮಿಟ್, ಇನ್ಶೂರನ್ಸ ಇಲ್ಲ, ಚಾಲಕರ ಬಳಿ ಲೈಸೆನ್ಸ್ ಇಲ್ಲ, ಮಿತಿಮೀರಿ ಪ್ರಯಾಣಿಕರನ್ನು ತುಂಬಿ ಅಪಾಯಕಾರಿಯಾಗಿ ಚಲಿಸುತ್ತಾರೆ. ಮಿತಿಮೀರಿದ ವೇಗದಲ್ಲಿ ಗಾಡಿ ಓಡಿಸುತ್ತಾರೆ. ಈ ಹಿಂದೆಯೂ ಹಲವಾರು ಅಪಘಾತಗಳಾಗಿವೆ ಆದರೆ ಮೊನ್ನೆ ಒಬ್ಬ ಅಮಾಯಕ ಗರ್ಭಿಣಿ ಮಹಿಳೆಯ ಜೀವ ಹೋಗಿದೆ. ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಈಗಲೇ ಎಲ್ಲದಕ್ಕೂ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.
ಆಟೋರಿಕ್ಷಾದಲ್ಲಿ ಕೇವಲ ಮೂವರು ಮಾತ್ರ ಪ್ರಯಾಣಿಸಬೇಕೆಂಬ ನಿಯಮವಿದ್ದರೂ ಕಾನೂನಿಗೆ ವಿರುದ್ಧವಾಗಿ 10 ರಿಂದ 12 ಪ್ರಯಾಣಿಕರನ್ನು ತುಂಬುತ್ತಾರೆ. ಡ್ರೈವರ ಸೀಟಿನಲ್ಲಿ ಮೂರ್ನಾಲ್ಕು ಜನ ಕುಳಿತುಕೊಳ್ಳುತ್ತಾರೆ. ಕೆಲವು ಚಾಲಕರು ಮೊಬೈಲನಲ್ಲಿ ಮಾತನಾಡುತ್ತ, ಮೊಬೈಲ್ ವೀಕ್ಷಿಸುತ್ತ ವಾಹನ ಚಲಾಯಿಸುತ್ತಾರೆ. ಪ್ರಖರವಾದ ಎಲ್‌ಇಡಿ ಲೈಟುಗಳನ್ನು ಹಾಕಿ ಮಿತಿಮೀರಿದ ವೇಗದಲ್ಲಿ ವಾಹನ ಚಾಲನೆ ಮಾಡುತ್ತಾರೆ. ಹೀಗಾಗಿ ಈ ದಾರಿಯಲ್ಲಿ ಸಂಚರಿಸುವ ಎಲ್ಲ ಆಟೋರಿಕ್ಷಾಗಳನ್ನು ಪರೀಕ್ಷಿಸಿ ನಿಯಮ ಮೀರುವ ವಾಹನಗಳ ಪರ್ಮಿಟ್ ರದ್ದುಗೊಳಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.