ಕುಮಟಾ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ವಿಧಾನಸಭಾ ಚುನಾವಣೆಯ ಕಾರ್ಯಾಲಯ ಉದ್ಘಾಟನೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಾಲಯ ಉದ್ಘಾಟಿಸಿದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವ್ಕರ್ ಮಾತನಾಡಿ, ಭಾರತಕ್ಕೆ ವಿಶಾಲ ಮತ್ತು ಸದೃಢ ಸಂವಿಧಾನವನ್ನು ನೀಡಿದ ಡಾ ಬಿ ಆರ್ ಅಂಬೇಡ್ಕರ್ ಇಡೀ ಜಗತ್ತಿಗೆ ಪ್ರಸಿದ್ಧರಾಗಿದ್ದಾರೆ. ದಲಿತರ ಕಲ್ಯಾಣಕ್ಕಾಗಿ ಹಗಲಿರುಳು ದುಡಿದು, ಈ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಂಥ ಧೀಮಂತ ವ್ಯಕ್ತಿಯನ್ನು ಚುನಾವಣೆಯಲ್ಲಿ ಸೋಲಿಸಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ ಎಂದರು.
ಬಳಿಕ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಮಾತನಾಡಿ, ನಮ್ಮ ಪಕ್ಷ ಹಾಲಿ ಶಾಸಕನಾದ ನನಗೆ ಎರಡನೇ ಬಾರಿ ಟಿಕೆಟ್ ನೀಡಿದೆ. ನಾನು ಏ.17ರಂದು ಸೋಮವಾರ 12 ಗಂಟೆಯಿOದ 1.15 ಗಂಟೆಯೊಳಗೆ ಮುಹೂರ್ತದ ಅಡಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ನಮ್ಮೆಲ್ಲ ಕಾರ್ಯಕರ್ತರು ಮತ್ತು ಪಕ್ಷದ ವಿವಿಧ ಹುದ್ದೆಯಲ್ಲಿರುವ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನನಗೆ ಬಲ ತುಂಬಬೇಕು ಎಂದರು.
ಬಿಜೆಪಿ ಮಾಜಿ ಮಂಡಲಾಧ್ಯಕ್ಷ ಕುಮಾರ ಮಾರ್ಕಾಂಡೆ, ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೇರಿ, ಪ್ರಮುಖರಾದ ಮದನ ನಾಯಕ, ಜಿ ಎಸ್ ಗುನಗಾ, ಡಾ ಜಿ ಜಿ ಹೆಗಡೆ, ಅಶೋಕ ಪ್ರಭು, ಮೋಹಿನಿ ಗೌಡ, ಮಹಾದೇವಿ ಮುಕ್ರಿ, ಜಿ ಐ ಹೆಗಡೆ, ವಿನಾಯಕ ನಾಯ್ಕ, ಆನಂದ ಕವರಿ ಇತರರು ಇದ್ದರು.