ಹೊನ್ನಾವರ: ತಾಲೂಕಿನ ಖರ್ವಾ ಶ್ರೀಸಿದ್ಧಿವಿನಾಯಕ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಣ್ಣರ ಕಲರವ ಎಂಬ ಹೊಸ ಕಾರ್ಯಕ್ರಮ ನಡೆಯಿತು.
ಒಂದು ದಶಕಕ್ಕಿಂತಲೂ ಹೆಚ್ಚಿನ ಕಾಲದಿಂದ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿರುವ ಶಿಕ್ಷಣ ಸಂಸ್ಥೆಯಾಗಿರುವ ಈ ವಿದ್ಯಾಮಂದಿರದಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸದಾಕಾಲ ಪ್ರೋತ್ಸಾಹಿಸುತ್ತಿದೆ. ಇದೀಗ ಈ ಸಂಸ್ಥೆ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹಾಕುವ ಉದ್ದೇಶದಿಂದ ಸುತ್ತಮುತ್ತಲಿನ ಇತರೆ ಶಾಲೆಗಳ ವಿದ್ಯಾರ್ಥಿಗಳಿಗೂ ವೇದಿಕೆಯನ್ನು ಕಲ್ಪಿಸಿಕೊಡುವ ಸಲುವಾಗಿ ಚಿಣ್ಣರ ಕಲರವವನ್ನು ಆಯೋಜಿಸಿತ್ತು. ಸುಮಾರು 50ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 3ರಿಂದ 7 ವರ್ಷದೊಳಗಿನ ಮ್ಕಕಳಿಗಾಗಿ ಛದ್ಮವೇಷ, ಕಥೆ ಹೇಳುವುದು, ಗಾಯನ ಸ್ಫರ್ದೆ, ಚಿತ್ರಕ್ಕೆ ಬಣ್ಣ ತುಂಬುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಬಿಎಸ್‌ಎನ್‌ಎಲ್ ಮಾಜಿ ಉದ್ಯೋಗಿ ಎಂ.ಎo.ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಕ್ಕಳಲ್ಲಿ ಭಾಗವಹಿಸುವ ಗುಣ ಬೆಳೆಯಬೇಕು ಎಂದರು. ನಿವೃತ್ತ ಶಿಕ್ಷಕ ಕೆ.ವಿ.ಹೆಗಡೆ ಹಾಗೂ ಎನ್.ಆರ್.ಹೆಗಡೆ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಹಾಜರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಸಿದ್ಧಿವಿನಾಯಕ ವಿದ್ಯಾಮಂದಿರದ ನಿರ್ದೇಶಕ ಕೃಷ್ಣಮೂರ್ತಿ ಭಟ್ ಶಿವಾನಿ ವಹಿಸಿ ಮಾತನಾಡಿ, ತಂದೆ- ತಾಯಿಗಳು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಬೇಕು. ಎಸ್‌ಎಸ್‌ಎಲ್‌ಸಿ ಆಗುವವರೆಗೆ ಮಾತ್ರ ಮಕ್ಕಳನ್ನು ಬಗ್ಗಿಸಲು ಸಾಧ್ಯ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಡಿ. ಸಮಾಜದಲ್ಲಿ ಮಕ್ಕಳು ಬೆಳೆಯಲು ಅವಕಾಶವನ್ನು ನೀಡಬೇಕು. ಜೊತೆಗೆ ಮಕ್ಕಳಿಗೆ ಗುರಿಯನ್ನು ಇಟ್ಟುಕೊಂಡು ಕಲಿಯಲು ಪ್ರೇರೇಪಣೆಯನ್ನು ನೀಡಬೇಕು ಎಂದು ನುಡಿದರು.
ಶ್ರೀಸಿದ್ಧಿವಿನಾಯಕ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪಿ.ಜಿ.ಹೆಗಡೆ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರತೀಕ್ಷಾ ಪ್ರಾರ್ಥಿಸಿದಳು. ಶಿಕ್ಷಕಿ ಪದ್ಮಾವತಿ ಗೌಡ ವಂದಿಸಿದರು. ಶಿಕ್ಷಕಿ ರೇಷ್ಮಾ ನಿರೂಪಿಸಿದರು.