ಕಾರವಾರ: ಮರಳಿ ಅಧಿಕಾರಕ್ಕೆ ಬರಬೇಕು ಎನ್ನುತ್ತಿರುವ ಬಿಜೆಪಿ, ಹೇಗಾದರೂ ಮಾಡಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲೇಬೇಕೆಂದು ತವಕಿಸುತ್ತಿರುವ ಕಾಂಗ್ರೆಸ್. ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬುದು ಪ್ರಾದೇಶಿಕ ಪಕ್ಷ ಜೆಡಿಎಸ್‌ನ ಗುರಿಯಾಗಿದೆ. ಇದಕ್ಕಾಗಿ ರಾಜ್ಯದ ಮತದಾರರ ಓಲೈಕೆಗೆ ಮೂರು ಪಕ್ಷಗಳು ನಾನಾ ರೀತಿಯ ಕಸರತ್ತು ಆರಂಭಿಸಿವೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಡುವೆ ಭರ್ಜರಿ ಪೈಪೋಟಿ: ರಾಜ್ಯದ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಅದಕ್ಕೂ ಮುನ್ನವೇ ಮೂರು ಪಕ್ಷಗಳ ನಾಯಕರು ಜಿದ್ದಿಗೆ ಬಿದ್ದವರಂತೆ ಮತದಾರರನ್ನು ಸೆಳೆಯಲು ಆಕರ್ಷಕ ಉಚಿತ ಕೊಡುಗೆಗಳ ಬಗ್ಗೆ ಆಶ್ವಾಸನೆಗಳನ್ನು ನೀಡುತ್ತಿವೆ. ಚುನಾವಣೆ ಬಂದಾಗ ಮತದಾರರನ್ನು ಸೆಳೆಯಲು ಉಚಿತ ಕೊಡುಗೆ ಆಶ್ವಾಸನೆ ನೀಡುವುದು ಹಿಂದಿನಿಂದಲೂ ಬಂದಿರುವ ಸಂಪ್ರದಾಯವಾಗಿ ಬಿಟ್ಟಿದೆ. ಆದರೆ, ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಬೇಕಾಗಿರುವ ಭರವಸೆಗಳನ್ನು ಈಗಾಗಲೇ ಸಮಾವೇಶ, ಚುನಾವಣಾ ಪ್ರಚಾರದ ರ‍್ಯಾಲಿಗಳಲ್ಲಿ ಪೈಪೋಟಿಗಿಳಿದವರಂತೆ ಮೂರು ಪಕ್ಷಗಳು ಪ್ರಕಟಿಸುತ್ತಿವೆ. ಉಚಿತ ಘೋಷಣೆಗಳಲ್ಲಿ ನಿರತರಾಗಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಯೋಜನೆಗಳನ್ನು ನೆನಪಿಸಲು ಮುಂದಾದ ಪಕ್ಷಗಳು: ಮತದಾರರನ್ನು ಸೆಳೆಯಲು ಕಾಂಗ್ರೆಸ್ ಅತ್ಯಾಕರ್ಷಕ ಚುನಾವಣೆ ಭರವಸೆಯನ್ನು ಪ್ರಕಟಿಸಿದರೆ, ಅದಕ್ಕೆ ಪ್ರತಿಯಾಗಿ ಬಿಜೆಪಿ ಮತ್ತೊಂದು ಉಚಿತ ಕೊಡುಗೆ ಪ್ರಕಟಿಸಿ ಮತದಾರರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತಾನೇನು ಕಡಿಮೆ ಇಲ್ಲವೆಂಬಂತೆ ಜೆಡಿಎಸ್ ವಿಭಿನ್ನವಾದ ಉಚಿತ ಕೊಡುಗೆ ಪ್ರಕಟಿಸುವ ಮೂಲಕ ಮತದಾರರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಸರ್ಕಾರದ ನಾನಾ ಅಭಿವೃದ್ಧಿ ಯೋಜನೆಗಳು ಹಾಗೂ ಮೋದಿ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಒಳಗೊಂಡು ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ಮತದಾರರ ಮುಂದಿಡುತ್ತಿದೆ. ಇನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಅಧಿಕಾರಾವಧಿಯ ಜನಕಲ್ಯಾಣ ಕಾರ್ಯಕ್ರಮಗಳನ್ನು ಮತದಾರರಿಗೆ ನೆನಪು ಮಾಡಿಕೊಡಲು ಪ್ರಯತ್ನಿಸುತ್ತಿವೆ.
ಚುನಾವಣಾ ಆಶ್ವಾಸನೆಗಳೇನು?: ಮತದಾರರ ಓಲೈಕೆಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ ಹಲವು ಆಶ್ವಾಸನೆ ನೀಡಿವೆ. ಕಾಂಗ್ರೆಸ್ ಭರವಸೆಗಳಿಗೆ ಬದ್ಧವಾಗುವುದಿಲ್ಲ ಎಂದು ಬಿಜೆಪಿ ಆರೋಪಿಸುತ್ತಿದೆ. ಉದ್ಯೋಗ ನಷ್ಟ ಮತ್ತಿತರ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಪ್ರತಿಪಕ್ಷಗಳು ಪ್ರಸ್ತಾಪಿಸುತ್ತಿವೆ. ಕಳೆದ ಕೆಲವು ಚುನಾವಣೆಗಳಲ್ಲಿ ಅತಂತ್ರ ಜನಾದೇಶದಿಂದ ಎದುರಾದ ಸಮಸ್ಯೆಗಳ ಬಗ್ಗೆ ಮೂರೂ ಪ್ರಮುಖ ಪಕ್ಷಗಳು ಪ್ರಸ್ತಾಪಿಸಿ, ಈ ಬಾರಿ ಸ್ಪಷ್ಟ ಬಹುಮತಕ್ಕಾಗಿ ಮನವಿ ಮಾಡುತ್ತಿವೆ. ಪ್ರಬಲ ಜಾತಿಗಳ ಒಲವು ಗಳಿಸುವ ಯತ್ನ ನಡೆದಿದ್ದು, ಮತಬ್ಯಾಂಕ್ ಗಟ್ಟಿಗೊಳಸುವ ಪ್ರಯತ್ನಕ್ಕೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಯತ್ನ ನಡೆಸಿವೆ. ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಬಲ ಸಂಪಾದಿಸಲು ಬಿಜೆಪಿ ಪ್ರಯತ್ನ ನಡೆಸಿದ್ದರೆ, ಲಿಂಗಾಯಿತ ಪ್ರಾಬಲ್ಯದ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಮುಂದಾಗಿವೆ.
ಯಾರ ಓಲೈಕೆ ಮಾಡ್ತಿವೆ ಈ ಮೂರು ಪಕ್ಷಗಳು?: ಹಿಜಾಬ್, ಹಲಾಲ್, ಟಿಪ್ಪು ಸುಲ್ತಾನ್ ಮತ್ತಿತರ ವಿವಾದಗಳನ್ನು ಸೃಷ್ಟಿಸಿ ಬಿಜೆಪಿ ಸಮಾಜವನ್ನು ಒಡೆಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಮತ್ತೊಂದೆಡೆ, ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದಲ್ಲಿ ಕಾಂಗ್ರೆಸ್ ತೊಡಗಿದೆ ಎಂದು ಬಿಜೆಪಿ ಆಪಾದಿಸುತ್ತಿದೆ. ಇದು ಪ್ರಚಾರದ ಅಖಾಡದಲ್ಲಿ ಇನ್ನಷ್ಟು ದೊಡ್ಡ ಸದ್ದು ಮಾಡುವ ನಿರೀಕ್ಷೆ ಇದೆ.