ಕುಮಟಾ: ತಾಲೂಕಿನ ಮೂರೂರು ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕಲಿಕಾ ಸ್ಪೂರ್ತಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಕ್ಷಕ ರವೀಂದ್ರ ಭಟ್ಟ ಸೂರಿ ಪ್ರಸ್ತುತ ಪಡಿಸಿದ ಬದುಕಿನ ಪಾಠ ಶಿಬಿರಾರ್ಥಿಗಳ ಗಮನ ಸೆಳೆಯಿತು.
ತಾಲೂಕಿನ ಮೂರೂರು ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಕಾ ಸ್ಪೂರ್ತಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಾಹಿತಿ ಮತ್ತು ವಾಗ್ಮಿ ರವೀಂದ್ರ ಭಟ್ ಸೂರಿ ಶಿಬಿರಾರ್ಥಿಗಳಿಗೆ ಬದುಕಿನ ಪಾಠದ ಬಗ್ಗೆ ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳು ಇಂದು ವರ್ತಮಾನದಲ್ಲಿ ಬದುಕಬೇಕಾಗಿದೆ. ನಿನ್ನೆ ಎನ್ನುವುದು ಸತ್ತುಹೋಗಿದೆ, ನಾಳೆ ನಮ್ಮ ಕೈಗೆ ಸಿಕ್ಕಿಲ್ಲ. ಇವತ್ತು ಎನ್ನುವುದು ನಮ್ಮ ಕೈಯಲ್ಲಿದೆ. ಈ ಕ್ಷಣವನ್ನು, ಅಮೂಲ್ಯ ಸಮಯವನ್ನು ಸದುಪಯೋಗಪಡಿಸಿಕೊಂಡರೆ ಭವಿಷ್ಯ ನಮ್ಮದಾಗುತ್ತದೆ. ಅಂತಹ ಕಾರ್ಯವನ್ನು ನೀವೆಲ್ಲರೂ ಮಾಡಬೇಕು. ವಿದ್ಯಾರ್ಥಿಗಳು ಸದಾ ಪ್ರಯತ್ನಿಶೀಲರಾಗಿರಬೇಕು. ಬದುಕಿನಲ್ಲಿ ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವ ಮನಸ್ಥಿತಿ ರೂಢಿಸಿಕೊಳ್ಳಬೇಕು. ಜೀವನದಲ್ಲಿ ಸಾಗಿ ಬಂದ ದಾರಿಯನ್ನೊಮ್ಮೆ ತಿರುಗಿ ನೋಡಿ ಪಾಪ ಪುಣ್ಯಗಳ ಲೆಕ್ಕಾಚಾರ ಮಾಡಬೇಕು. ಹಿರಿಯರ ಮಾತನ್ನು ಗೌರವಿಸಿ ಒಳ್ಳೆಯ ಸಂಸ್ಕಾರ ರೂಢಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಾಹಿತಿ ರವೀಂದ್ರ ಭಟ್ ಸೂರಿ, ತಾವು ಬರೆದ ಕೃತಿಗಳಾದ ಆರು ಪುಸ್ತಕಗಳನ್ನು ಶಾಲೆಗೆ ದೇಣಿಗೆಯಾಗಿ ನೀಡಿ ಶಿಕ್ಷಣ ಪ್ರೇಮ ಮೆರೆದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಗತಿ ವಿದ್ಯಾಲಯದ ಪ್ರಾಚಾರ್ಯರಾದ ಜಿ. ಎಂ. ಭಟ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿದ ನಂತರದಲ್ಲಿ ಪಠ್ಯವನ್ನು ಬಿಟ್ಟು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಹುಟ್ಟಿಸುವ, ಕೌಶಲ್ಯ ಬೆಳೆಸುವ ಉದ್ದೇಶದಿಂದ ಇಂತಹ ಶಿಬಿವನ್ನು ಆಯೋಜಿಸುತ್ತಿದ್ದೇವೆ. ಈ ಶಿಬಿರ ಆರು ದಿನಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆದಿರುವುದಕ್ಕೆ ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕರಾದ ವಿವೇಕ್ ಆಚಾರಿ, ಶಿಬಿರದ ನಿರ್ದೇಶಕರಾದ ಶಿಕ್ಷಕ ಜಿ. ಆರ್. ನಾಯ್ಕ ಉಪಸ್ಥಿತರಿದ್ದರು. ವಿದ್ಯಾರ್ಥಿ ವರ್ಷಿಣಿ ಹೆಗಡೆ ಸ್ವಾಗತಿಸಿದರು. ಶಿಕ್ಷಕ ಜಿ.ಆರ್. ನಾಯ್ಕ ಪ್ರಾಸ್ತಾವಿಸಿದರು. ಮಾನಸ ಗೌಡ ವಂದಿಸಿದರು. ವಿದ್ಯಾ ಹೆಗಡೆ ನಿರೂಪಿಸಿದರು. ಆರು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ನೀಡಲಾದ ವಿವಿಧ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸಿದರು.