ಕಾರವಾರ: ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಅಲ್ಲ. ಅವರು ಇಲ್ಲಿನ ಪದಾಧಿಕಾರಿಗಳ ಸಂಪರ್ಕದಲ್ಲಿಲ್ಲ ಎಂದು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಅಜಿತ್ ಪೊಕಳೆ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯ ವೇಳೆ ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡು ಬೆಂಗಳೂರಿಗೆ ಹೋಗುವವರಿದ್ದಾರೆ. ಆದರೆ ಕ್ಷೇತ್ರದಲ್ಲಿ ಅಭ್ಯರ್ಥಿ ಇಲ್ಲದಿದ್ದರೂ ತೊಂದರೆಯಿಲ್ಲ, ಅಂಥವರಿಗೆ ಟಿಕೆಟ್ ನೀಡಬಾರದು. ಈಗಾಗಲೇ ತಾಲೂಕು ಘಟಕವು ರಾಜಕೀಯ ಹಿನ್ನೆಲೆ ಇರುವ ಅಭ್ಯರ್ಥಿಯೊಬ್ಬರನ್ನು ಗುರುತಿಸಿದೆ. ಅವರೊಂದಿಗೆ ಎರಡು- ಮೂರು ಹಂತದ ಮಾತುಕತೆ ಕೂಡಾ ನಡೆದಿದೆ. ಈ ಬಗ್ಗೆ ಪಕ್ಷ ವರಿಷ್ಠರಿಗೂ ತಿಳಿಸಿದ್ದು, ಇನ್ನು ಎರಡು- ಮೂರು ದಿನಗಳಲ್ಲಿ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಲಿದ್ದೇವೆ ಎಂದರು.
ಜಿ.ಪo ಮಾಜಿ ಸದಸ್ಯೆ ಚೈತ್ರಾ ಕೊಠಾರಕರ ಅವರು ಕಾರವಾರದಿಂದ ಜೆಡಿಎಸ್ ಟಿಕೆಟ್‌ನಡಿ ಸ್ಪರ್ಧಿಸಲಿದ್ದಾರೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ, ಜೈತ್ರಾ ಅವರು ನಮ್ಮನ್ನು ಸಂಪರ್ಕಿಸಿಲ್ಲ. ಹಳಿಯಾಳದ ಜೆಡಿಎಸ್ ಮುಖಂಡ ಎಸ್.ಎಲ್.ಘೋಟ್ನೇಕರ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದಿದೆ. ಪಕ್ಷ ಒಪ್ಪಿದರೆ ಬೆಂಬಲ ನೀಡುತ್ತೇವೆ ಎಂದರು. ಜೆಡಿಎಸ್ ಮುಖಂಡ ಖಲಿಲುಲ್ಲಾ ಶೇಖ್, ಪ್ರದೀಪ ಶೇಜವಾಡಕರ ಇದ್ದರು.
ಸವದತ್ತಿಯ ಯಲ್ಲಮ್ಮನಿಗೆ ಹರಕೆ:
ಈ ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದಾಗ ಕಾಲ್ನಡಿಗೆಯಲ್ಲಿ ಕಾರವಾರದಿಂದ ಧರ್ಮಸ್ಥಳಕ್ಕೆ ಹೋಗಿ ಹರಕೆ ಸಲ್ಲಿಸಿದ್ದೆ. ಈ ಬಾರಿಯ ಚುನಾವಣಾ ಫಲಿತಾಂಶದ ನಂತರ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೆ ಕಾರವಾರದಿಂದ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಸೈಕಲ್ ಮೂಲಕ ತೆರಳಿ ಕೇಶಮುಂಡನೆ ಮಾಡಿಸುತ್ತೇನೆಂದು ಹರಕೆ ಹೊತ್ತಿದ್ದೇನೆ ಎಂದು ಅಜಿತ್ ಪೊಕಳೆ ತಿಳಿಸಿದರು.