ಕುಮಟಾ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರೇಶ ಮೇಸ್ತಾ ಸಾವಿನ ಪ್ರಕರಣದಿಂದ ಕಾಂಗ್ರೆಸ್‌ಗೆ ಸೋಲಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರಿಗೆ ಸ್ಪರ್ಧಿಸಲು ಮತ್ತೊಂದು ಅವಕಾಶ ನೀಡಬೇಕೆಂದು ಗೋಕರ್ಣ ಭಾಗದ ಕಾಂಗ್ರೆಸ್ ಕಾರ್ಯಕರ್ತರು ಹೈಕಮಾಂಡ್‌ನ್ನು ಆಗ್ರಹಿಸಿದರು.
ತಾಲೂಕಿನ ಗೋಕರ್ಣದ ತಾರಮಕ್ಕಿಯಲ್ಲಿ ಸಭೆ ಸೇರಿದ ಕಾಂಗ್ರೆಸ್‌ನ ಮಹಿಳಾ ಕಾರ್ಯಕರ್ತರು ವಿಧಾನಸಭಾ ಚುನಾವಣೆಯಲ್ಲಿ ಕುಮಟಾ ಟಿಕೆಟ್ ಘೋಷಣೆ ವಿಚಾರದಲ್ಲಿ ಉದ್ಭವಿಸಿದ ಗೊಂದಲದ ಬಗ್ಗೆ ಚರ್ಚೆ ನಡೆಸಿದರು. ತೋರ್ಕೆ ಗ್ರಾಪಂ ಮಾಜಿ ಅಧ್ಯಕ್ಷೆ ಸುಮಿತ್ರಾ ಗೌಡ ಮಾತನಾಡಿ, ಮಾಜಿ ಶಾಸಕರಾದ ಶಾರದಾ ಮೋಹನ ಶೆಟ್ಟಿ ಅವರು ಶಾಸಕರಿದ್ದಾಗ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದರು. ಜನರ ಸಮಸ್ಯೆಗಳಿಗೆ, ಆಶೋತ್ತರಗಳಿಗೆ ಪಕ್ಷ ಬೇಧ ಮರೆತು ಕಾರ್ಯ ನಿರ್ವಹಿಸುವ ಮೂಲಕ ಜನಮೆಚ್ಚಿದ ಶಾಸಕಿ ಎಂದು ಹೆಸರು ಗಳಿಸಿದ್ದರು. ಆದರೆ ಚುನಾವಣೆ ಸಂದರ್ಭದಲ್ಲಿ ಹೊನ್ನಾವರದಲ್ಲಿ ಘಟಿಸಿದ ಪರೇಶ ಮೇಸ್ತಾನ ಸಾವನ್ನು ವೈಭವಿಕರಿಸಿ, ಕೊಲೆ ಎಂದು ಬಿಂಬಿಸಲಾಯಿತು. ಕಾಂಗ್ರೆಸ್‌ನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಯಿತು. ಆ ಸಂದರ್ಭದಲ್ಲಿ ಉಂಟಾದ ಗಲಭೆಯ ಲಾಭ ಪಡೆದ ಬಿಜೆಪಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿತು. ಕಾಂಗ್ರೆಸ್ ಸೋಲು ಅನುಭವಿಸಬೇಕಾಯಿತು. ಈ ಪರೇಶ ಮೇಸ್ತಾನ ಪ್ರಕರಣ ಕೇವಲ ಕುಮಟಾ ಅಷ್ಟೆ ಅಲ್ಲ. ಇಡೀ ಕರಾವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಸೋಲಾಗಿದೆ. ಕಾರವಾರ ಮತ್ತು ಭಟ್ಕಳ ಕ್ಷೇತ್ರದಲ್ಲಿ ಮಾಜಿ ಶಾಸಕರಿಗೆ ಈ ಬಾರಿ ಟಿಕೆಟ್ ನೀಡಲಾಗಿದೆ. ಅದರಂತೆ ನಮ್ಮ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರಿಗೂ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಬೇಕು. ಮಹಿಳಾ ಪ್ರಾತಿನಿಧ್ಯದಡಿಯಲ್ಲಿ ಜಿಲ್ಲೆಯಲ್ಲಿ ಒಬ್ಬರಿಗಾದರೂ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ನ್ನು ಆಗ್ರಹಿಸಿದರು.
ಗೋಕರ್ಣ ಗ್ರಾಪಂ ಉಪಾಧ್ಯಕ್ಷ ಶಾರದಾ ಮೂಡಂಗಿ, ಪ್ರಮುಖರಾದ ಶಶಿಕಲಾ ಗೌಡ, ಪುಷ್ಪ ತಳೇಕರ್, ರೇಣುಕಾ ಗಾಂವ್ಕರ್ ಇತರರು ಮಾತನಾಡಿ, ದಶಕಗಳ ಕಾಲ ಕ್ಷೇತ್ರದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿ, ಪಕ್ಷದಲ್ಲಿ ಮುಖಂಡರಾಗಿ ಗುರುತಿಸಿಕೊಂಡ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಲ್ಲಿ ಸಮರ್ಥರನ್ನು ಆಯ್ಕೆ ಮಾಡಿ ಟಿಕೆಟ್ ನೀಡಿದರೆ ಮಾತ್ರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯ. ಯಾರದೋ ಒತ್ತಡಕ್ಕೆ, ಓಲೈಕೆಗೆ ಮಣಿದು ಆಳ್ವಾರಿಗೆ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ವಾಶೌಟ್ ಆಗುವುದು ಗ್ಯಾರಂಟಿ. ಹೈ ಕಮಾಂಡ್ ಅಂಥ ತಪ್ಪು ನಿರ್ಧಾರ ಕೈಗೊಳ್ಳದಂತೆ ಪಕ್ಷದ ನಾಯಕರು ಎಚ್ಚರ ವಹಿಸಬೇಕು. ಅಧಿಕಾರವಿಲ್ಲದಿದ್ದರೂ ಕಳೆದ ಐದು ವರ್ಷಗಳಿಂದ ಪಕ್ಷದ ಎಲ್ಲ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತ ಕಾರ್ಯಕರ್ತರ ಸುಖ, ದುಃಖಗಳಿಗೂ ಸ್ಪಂದಿಸುವ ಕಾರ್ಯ ಮಾಡಿದ ಶಾರದಾ ಶೆಟ್ಟಿ ಅವರಿಗೆ ಟಿಕೆಟ್ ನೀಡಬೇಕು. ಒಂದು ವೇಳೆ ಕಾರ್ಯಕರ್ತರ ಅಭಿಪ್ರಾಯಗಳಿಗೆ ಮನ್ನಣೆ ನೀಡದೇ ಈ ಕ್ಷೇತ್ರಕ್ಕೆ ಸಂಬoಧಪಡದ ಹೊರಗಿನ ವ್ಯಕ್ತಿಗೆ ಟಿಕೆಟ್ ನೀಡಿದರೆ, ನಾವೆಲ್ಲ ಕಾರ್ಯಕರ್ತರು ಚುನಾವಣೆಯಿಂದ ದೂರ ಉಳಿಯುತ್ತೇವೆ ಎಂದು ಹೈಕಮಾಂಡ್‌ಗೆ ಸ್ಪಷ್ಟವಾಗಿ ಎಚ್ಚರಿಸಿದರು.
ಈ ಸಭೆಯಲ್ಲಿ ಕುಮಟಾ ತಾಲೂಕು ಮಹಿಳಾ ಅಧ್ಯಕ್ಷೆ ಸುರೇಖಾ ವಾರೇಕರ್, ಕುಮಟಾ ಪುರಸಭೆ ಸದಸ್ಯೆ ವಿನಯ ವಿನು ಜಾರ್ಜ್, ಕಾಂಗ್ರೆಸ್ ಕಾರ್ಯಕರ್ತರಾದ ದೇವಕಿ ಗೌಡ, ಪಾರ್ವತಿ ನಾಯ್ಕ, ರೇಣುಕಾ ನಾಯ್ಕ, ಗೀತಾ ಭಂಡರ‍್ಕರ್, ಗುಲಾಬಿ ಗೌಡ ಇತರರು ಇದ್ದರು.