ಕಾರವಾರ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ಕ್ಕೆ ಸಂಬಂಧಿಸಿದಂತೆ ಚುನಾವಣಾ ಪ್ರಚಾರದ ಅನುಮತಿಗಾಗಿ ಅನಗತ್ಯ ಅಲೆದಾಟ, ಒತ್ತಡವನ್ನು ತಪ್ಪಿಸಲು ಸುವಿಧಾ ತಂತ್ರಾಂಶವನ್ನು ಅಭಿವೃದ್ಧಿಪಡಿಸಿರುವುದಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಎಲ್ಲ ರಾಜಕೀಯ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಛಿಸುವವರು, ಜಾತ್ರಾ ಮಹೋತ್ಸವಗಳನ್ನು ನಡೆಸಲು ಅನುಮತಿ ಪಡೆಯಲು ಹಾಗೂ ವಿವಿಧ ಸಂಘಟನೆಗಳು ಇದರ ಸದ್ಬಳಕೆ ಮಾಡಿಕೊಳ್ಳಬಹುದಾಗಿರುತ್ತದೆ. ಚುನಾವಣಾ ಪ್ರಚಾರ ಕಾರ್ಯಕ್ಕೆ ಅಗತ್ಯವಿರುವ ಅನುಮತಿಗಳನ್ನು ಸರಳವಾಗಿ ನೀಡಲು ಭಾರತ ಚುನಾವಣಾ ಆಯೋಗ ಸುವಿಧಾ ತಂತ್ರಾಂಶದ ಆನ್ಲೈನ್ ಅಪ್ಲಿಕೇಶನ್ ನೀಡಿದೆ. ಇದನ್ನು ಬಳಸಿಕೊಳ್ಳುವ ಮೂಲಕ ಚುನಾವಣಾ ಪ್ರಚಾರಕ್ಕೆ ಅಗತ್ಯವಿರುವ ಅನುಮತಿಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ ಎಂದರು.
ಸುವಿಧಾ ತಂತ್ರಾಂಶದಲ್ಲಿ ರಾಜಕೀಯ ಪಕ್ಷ, ಪಕ್ಷದ ಅಭ್ಯರ್ಥಿ ಏಜಂಟ್, ಕಾರ್ಯಕರ್ತ ಅಥವಾ ಇತರರು ತಮಗೆ ಬೇಕಿರುವ ಚುನಾವಣಾ ಪ್ರಚಾರ ಕಾರ್ಯಗಳಿಗೆ ಅನುಮತಿ ಪಡೆಯಲು ಆನ್‌ಲೈನ್ ಮೂಲಕ ಅಗತ್ಯ 48 ಗಂಟೆ ಮೊದಲು ಸಲ್ಲಿಸಬೇಕು. ಸಲ್ಲಿಕೆಯಾದ ಅರ್ಜಿಯನ್ನು ಸಂಬಂಧಿಸಿದ ಇಲಾಖೆಗಳು ಪರಿಶೀಲಿಸಿ, ಒಪ್ಪಿಗೆ ನೀಡಿದ ನಂತರ ಆಯಾ ಚುನಾವಣಾಧಿಕಾರಿಗಳು ಅನುಮತಿ ಪತ್ರ ನೀಡುತ್ತಾರೆ. ಹಾಗೆಯೇ ಚುನಾವಣಾ ಸಭೆ, ರ‍್ಯಾಲಿ, ಜಾಥಾ, ಪ್ರಚಾರ ಸಾಮಗ್ರಿ ಅಳವಡಿಕ, ವೇದಿಕೆ, ಮೈಕ್, ವಾಹನ, ಸಮಾರಂಭ ಮುಂತಾದ ರೀತಿಯ ಕಾರ್ಯಗಳಿಗೆ ಸುವಿಧಾದಲ್ಲಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಅನುಮತಿ ಪತ್ರ ಪಡೆಯಬಹುದು. ವಿವಿಧ ರೀತಿಯ ಚುನಾವಣಾ ಪ್ರಚಾರ ಕಾರ್ಯ ಮತ್ತು ಅವುಗಳಿಗೆ ಸಂಬಂಧಿಸಿದಂತೆ ಮತಕ್ಷೇತ್ರ ವ್ಯಾಪ್ತಿಗೆ ಆಯಾ ಚುನಾವಣಾ ಅಧಿಕಾರಿಗಳು, ಜಿಲ್ಲಾ ವ್ಯಾಪ್ತಿಗೆ ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ರಾಜ್ಯಮಟ್ಟಕ್ಕೆ ರಾಜ್ಯ ಚುನಾವಣಾ ಆಯೋಗ ಅನುಮತಿಪತ್ರ ನೀಡುತ್ತದೆ ಎಂದರು.
ಸೀ-ವಿಜಿಲ್ ತಂತ್ರಾಂಶವನ್ನು ಕೂಡ ಅಭಿವೃದ್ಧಿ ಪಡಿಸಿದ್ದು, ಇದರಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಯಾವುದೇ ಮಾಹಿತಿ ಇದ್ದಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಸೀ- ವಿಜಿಲ್ ಆಪ್ ಡೌನ್ಲೋಡ್ ಮಾಡಿಕೊಂಡು ಅ ಮೂಲಕ ಛಾಯಾಚಿತ್ರ ವಿಡಿಯೋ ಅಥವಾ ಧ್ವನಿಮುದ್ರಿತ ಕ್ಲಿಪಿಂಗ್ಸ್ ಗಳನ್ನು ದಾಖಲಿಸಿಕೊಂಡು ದೂರನ್ನು ದಾಖಲಿಸಬಹುದಾಗಿರುತ್ತದೆ. 24*7 ಸಿದ್ಧವಾಗಿರುವ ಎಫ್‌ಎಸ್‌ಟಿ ಪಡೆಯು ತುರ್ತಾಗಿ ಸ್ಥಳಕ್ಕೆ ಧಾವಿಸಿ ಸದರಿ ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.