ಹಳಿಯಾಳ: ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 55 (ಎ) (ಬಿ) ಪ್ರಕಾರ 1 ವರ್ಷಗಳ ಕಾಲ ಗಡಿಪಾರು ಮಾಡುವಂತೆ ಉಪ ವಿಭಾಗಾಧಿಕಾರಿಗಳಿಗೆ ಸಲ್ಲಿಸಿದ ಪ್ರಸ್ತಾವನೆಯಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಮುತ್ನಾಳ ತಮ್ಮ ವಕೀಲರೊಂದಿಗೆ ವಿಚಾರಣೆಗೆ ಹಾಜರಾಗಿ ಸಮಯವನ್ನು ತೆಗೆದುಕೊಂಡರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಹೂಡಿದ್ದ ಎಲ್ಲ ಹಳೆಯ ಕೇಸ್‌ಗಳು ಈಗಾಗಲೇ ಖುಲಾಸೆಯಾಗಿದೆ. ಈಗ ಕೊಡುತ್ತಿರುವ ಕಾರಣಗಳು ಹಿಂದುತ್ವದ ಪರವಾಗಿ ಎತ್ತುವ ಯಾವುದೇ ಧ್ವನಿಯನ್ನು ಹತ್ತಿಕ್ಕುವ ವ್ಯವಸ್ಥಿತ ರೂಪದ ಸಂಚಿನ ಭಾಗವಾಗಿದೆ. ಈಗಾಗಲೇ ವಿಚಾರಣೆಯಲ್ಲಿ ಮನವರಿಕೆ ಮಾಡುವ ಪ್ರಯತ್ನ ಮಾಡಲಾಗಿದ್ದು, ಸ್ವಲ್ಪ ಸಮಯಾವಕಾಶದ ವಿನಂತಿಯಂತೆ ಸಮಯ ನೀಡಿದ್ದಾರೆ. ಯಾರೇ ಆಗಲಿ ಎಷ್ಟೇ ಪ್ರಯತ್ನ ಮಾಡಿ ಹಿಂದುತ್ವದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಯಾವತ್ತೂ ಯಶ ಸಿಗಲಾರದು ಎಂದರು.
ಈಗಾಗಲೇ ಮಾಜಿ ಶಾಸಕರು ಮತ್ತು ಜಿಲ್ಲಾ ಬಿಜೆಪಿ ಘಟಕ, ತಾಲೂಕಾ ಬಿಜೆಪಿ ಘಟಕ, ಪಕ್ಷದ ಪ್ರಮುಖ ಎಲ್ಲಾ ಕಾರ್ಯಕರ್ತರು ಕಾನೂನು ಹೋರಾಟದಲ್ಲಿ ಕೈಜೋಡಿಸಲು ಮುಂದೆ ಬಂದಿದ್ದು, ಮುಂದಿನ ದಿನಗಳಲ್ಲಿ ಕಾನೂನು ಪ್ರಕಾರವೇ ಎಲ್ಲ ಆರೋಪಗಳಿಗೆ ಉತ್ತರಿಸುತ್ತೇನೆ ಎಂದು ಹೇಳಿದರು.