ಹೊನ್ನಾವರ: ತಾಲೂಕು ಮಟ್ಟದ ಮತದಾರ ಜಾಗೃತಿ ಕಾರ್ಯಕ್ರಮ ತಾಲೂಕಾ ಪಂಚಾಯತಿ ಆವರಣದಲ್ಲಿ ತಾಲೂಕು ಮಟ್ಟದ ಐಕಾನ್ ವ್ಯಕ್ತಿ ಮತ್ತು ಹಿರಿಯ ಜಾನಪದ ವಿದ್ವಾಂಸ ಡಾ.ಎನ್.ಆರ್.ನಾಯಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ನಮ್ಮ ಭಾರತ ದೇಶವು ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇಲ್ಲಿ ಪ್ರಜೆಗಳೇ ಪ್ರಭುಗಳಾಗಿರುತ್ತಾರೆ. ಮತದಾನವೇ ಪ್ರಜಾಪ್ರಭುತ್ವದ ಮೂಲಾಧಾರವಾಗಿದ್ದು, ಯಾವುದೇ ಜಾತಿ, ಧರ್ಮ, ಪಂಥ ಇವುಗಳನ್ನು ಪರಿಗಣಿಸದೇ ಹಣ, ಹೆಂಡ ಅಥವಾ ಯಾವುದೇ ವಸ್ತುಗಳ ಆಮಿಷಕ್ಕೆ ಒಳಗಾಗದೇ ಪ್ರಾಮಾಣಿಕವಾಗಿ ಮತ್ತು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ನಾಡನ್ನು ಶಾಂತಿಯ ತೋಟವನ್ನಾಗಿಸಲು ಪ್ರಯತ್ನಿಸಬೇಕೆಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ತಹಶಿಲ್ದಾರ ರವಿರಾಜ್ ದೀಕ್ಷಿತ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ನಾಯ್ಕ, ಸಹಾಯಕ ನಿರ್ದೇಶಕ ಕೃಷ್ಣಾನಂದ ಕೆ., ತಾಲೂಕಿನ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ತಾ.ಪಂ. ವ್ಯವಸ್ಥಾಪಕ ರಾಮ ಭಟ್ಟ ಸ್ವಾಗತಿಸಿ, ಯುವಜನಸೇವಾಧಿಕಾರಿ ಸುಧೀಶ ನಾಯ್ಕ ವಂದಿಸಿದರು.