ಕುಮಟಾ: ಉತ್ತರಕನ್ನಡ ಜಿಲ್ಲೆಯಲ್ಲಿ ಬಹುಸಂಖ್ಯಾತರಾದ ನಾಮಧಾರಿ ಸಮಾಜದ ನಾಯಕರನ್ನು ರಾಜಕೀಯವಾಗಿ ಮುಗಿಸುವ ಕುತಂತ್ರ ಮಾಡುತ್ತಿರುವ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರ ನಡೆಯನ್ನು ಈಡಿಗ ಮಹಾಸಭಾದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಉಗ್ರವಾಗಿ ಖಂಡಿಸಿದ್ದಾರೆ.
ಭೌಗೋಳಿಕವಾಗಿ ವಿಸ್ತಾರವಾದ ಜಿಲ್ಲೆ ಉತ್ತರಕನ್ನಡ ಜಿಲ್ಲೆಯಲ್ಲಿ ಬಹುಸಂಖ್ಯಾತರಾದ ನಾಮಧಾರಿ ಸಮಾಜಕ್ಕೆ ಈತನ ರಾಜಕೀಯ ಪ್ರಾತಿನಿಧ್ಯತೆ ದೊರೆತಿಲ್ಲ ಎಂದರೆ ಅದಕ್ಕೆ ಮುಖ್ಯ ಕಾರಣ ಮಾಜಿ ಸಚಿವ ದೇಶಪಾಂಡೆ. ಅವರ ರಾಜಕೀಯ ಷಡ್ಯಂತ್ರವೇ ಇದಕ್ಕೆಲ್ಲ ಕಾರಣ ಎಂದಿರುವ ಅವರು, ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ನಾಮಧಾರಿ ಸಮಾಜದ ಮತದಾರರೇ ಬಹುಸಂಖ್ಯಾತರು ಮತ್ತು ನಿರ್ಣಾಯಕ ಮತದಾರರಾಗಿದ್ದರೂ ಕಾಂಗ್ರೆಸ್ ಆ ಸಮಾಜವನ್ನು ತಮ್ಮ ಅಧಿಕಾರಕ್ಕಾಗಿ ಮಾತ್ರ ಬಳಸಿಕೊಂಡಿದೆ. ಮೂರುನಾಲ್ಕು ದಶಕಗಳ ಕಾಲ ಆಡಳಿತ ನಡೆಸಿದ ದೇಶಪಾಂಡೆ ಅವರು ಸದಾ ನಾಮಧಾರಿ ಮುಖಂಡರನ್ನು ತುಳಿಯುವ ಕೆಲಸ ಮಾಡಿದ್ದಾರೆ ಎಂದು ದೂರಿದ್ದಾರೆ.
ಕರಾವಳಿಯ ಮೂರು ಕ್ಷೇತ್ರ ಮತ್ತು ಘಟ್ಟದ ಮೇಲ್ಭಾಗದ ಕ್ಷೇತ್ರದಲ್ಲೂ ಮೇಲ್ವರ್ಗದವರನ್ನೆ ಬೆಳೆಸುವ ಮೂಲಕ ಕ್ಷೇತ್ರದ ಬಹುದೊಡ್ಡ ಸಮಾಜಕ್ಕೆ ಸಮರ್ಪಕವಾದ ರಾಜಕೀಯ ಪ್ರಾತಿನಿಧ್ಯ ನೀಡದೇ ಅನ್ಯಾಯ ಮಾಡಲಾಗಿದೆ. ಈ ಬಾರಿಯ ಚುನಾವಣೆಯ ಟಿಕೆಟ್ ಹಂಚಿಕೆಯ ವಿಷಯದಲ್ಲೂ ಕುಮಟಾ, ಭಟ್ಕಳ ಮತ್ತು ಶಿರಸಿ ಕ್ಷೇತ್ರದಲ್ಲಿ ನಾಮಧಾರಿ ಸಮಾಜದ ಆಕಾಂಕ್ಷಿಗಳನ್ನು ಕಡೆಗಣಿಸಿ, ಬೇರೆಯವರ ಹೆಸರನ್ನೆ ಕಾಂಗ್ರೆಸ್ ಹೈಕಮಾಂಡ್‌ಗೆ ಕಳುಹಿಸಿರುವ ಮಾಹಿತಿ ಇದೆ. ದೇಶಪಾಂಡೆ ಅವರ ಈ ನಡೆಯನ್ನು ನಾವು ಉಗ್ರವಾಗಿ ಖಂಡಿಸುವುದಾಗಿ ತಿಳಿಸಿರುವ ಅವರು, ಇಡೀ ಜಿಲ್ಲೆಯಲ್ಲಿ ದೇಶಪಾಂಡೆ ಅವರು ನಾಮಧಾರಿ ಸಮಾಜದ ಆಕ್ರೋಶವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಜಿಲ್ಲೆಯ ನಾಮಧಾರಿ ನಾಯಕರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಜಿಲ್ಲೆಯಲ್ಲಿ ಕನಿಷ್ಠ ಶಿರಸಿ ಮತ್ತು ಕುಮಟಾ ವಿಧಾನಸಭಾ ಕ್ಷೇತ್ರದಲ್ಲಾದರೂ ನಾಮಧಾರಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸುವ ಮೂಲಕ ಆ ಸಮಾಜಕ್ಕೆ ಗೌರವ ಒದಗಿಸಿಕೊಡಬೇಕು. ಇಲ್ಲವಾದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಬಹು ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ನಾನೇ ಸ್ವತಃ ಉತ್ತರಕನ್ನಡ ಜಿಲ್ಲೆಯಲ್ಲಿ ಪಾದಯಾತ್ರೆ ಕೈಗೊಂಡು ನಾಮಧಾರಿ ಸಮಾಜವನ್ನು ಎಚ್ಚರಿಸುವ ಕಾರ್ಯ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಾಮಧಾರಿಗಳನ್ನು ಮುಗಿಸಲು ದೇಶಪಾಂಡೆ ಕುತಂತ್ರ: ಪ್ರಣವಾನಂದ ಕಿಡಿ
