ಭಟ್ಕಳ: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಈಗಾಗಲೇ ಪೂರ್ವ ಸಿದ್ಧತೆ ನಡೆಸಲಾಗಿದೆ. ಮುಕ್ತ ನ್ಯಾಯ ಸಮ್ಮತ ಚುನಾವಣೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಉಪವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್. ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹೊಸ ಮತದಾರರ ಹೆಸರು ಸೇರ್ಪಡೆ ಹಾಗೂ ಪಟ್ಟಿ ಸಿದ್ಧಗೊಳ್ಳುತ್ತಿದೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕದ ಹತ್ತು ದಿನದ ಮುಂಚಿನವರೆಗೂ ಹೊಸ ಮತದಾರರ ಅರ್ಜಿ ನೀಡುವ ಅವಕಾಶವಿದ್ದು, ಆ ಬಳಿಕ ಅರ್ಜಿ ಸಲ್ಲಿಕೆ ಸ್ಥಗಿತಗೊಳಿಸಲಾಗುವುದು. ಈಗಾಗಲೇ 539 ಬಿಎಲ್‌ಓಗಳ ಸಹಕಾರದಿಂದ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದೇ ಇದ್ದವರು ಸಂಬOಧಪಟ್ಟ ಮತಗಟ್ಟೆಯ ಅಧಿಕಾರಿಗಳ ಬಳಿ ನಮೂನೆ-6ನ್ನು ಭರ್ತಿ ಮಾಡಿ ಸಲ್ಲಿಸಬಹುದಾಗಿದೆ ಎಂದರು.
ಕ್ಷೇತ್ರದಲ್ಲಿ ಒಟ್ಟು 2772 ವಿಶೇಷಚೇತನ ಮತದಾರರಿದ್ದು, 18ರಿಂದ 20 ವಯಸ್ಸಿನ ಒಟ್ಟು 1703 ಮತದಾರರಿದ್ದಾರೆ. 248 ಮತಗಟ್ಟೆಗಳ ಪೈಕಿ 5 ಮಹಿಳಾ ಮತಗಟ್ಟೆ, 2 ವಿಶೇಷಚೇತನ ಮತಗಟ್ಟೆ ಹಾಗೂ 2 ಯುವ ಮತಗಟ್ಟೆಯ ಜೊತೆಗೆ 2 ಮಾದರಿ ಮತಗಟ್ಟೆಯನ್ನು ಆಯ್ಕೆ ಮಾಡಲಾಗಿದ್ದು, ಇದನ್ನು ಪ್ರಾದೇಶಿಕ ಸೊಗಡಿನಲ್ಲಿ ಅಲಂಕರಿಸಲಿದ್ದೇವೆ. 14 ಸೂಕ್ಷö್ಮ ಹಾಗೂ 64 ಅತೀ ಸೂಕ್ಷö್ಮ ಮತಗಟ್ಟೆಯನ್ನು ಆಯ್ಕೆ ಮಾಡಿ ಸಕಲ ಭದ್ರತೆ ಒದಗಿಸಲಾಗುತ್ತಿದೆ ಎಂದರು.
ಕ್ಷೇತ್ರದಲ್ಲಿ ನಾಲ್ಕು ಪೊಲೀಸ್ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದ್ದು, ಈ ಪೈಕಿ ಗೇರುಸೊಪ್ಪ, ಕುಂಟವಾಣಿ, ಸರ್ಪನಕಟ್ಟಾ ಹಾಗೂ ಶಿರಾಲಿ ಜೊತೆಗೆ ಎರಡು ಅಂತರ್‌ಜಿಲ್ಲಾ ಚೆಕ್ ಪೋಸ್ಟ್ ಸಹ ಕಾರ್ಯನಿರ್ವಹಿಸಲಿವೆ. 25 ಸೆಕ್ಟರ್ ಅಧಿಕಾರಿಗಳು, 3 ಫ್ಲೆöÊಯಿಂಗ್ ಸ್ಕಾ÷್ವಡ್, 3 ಸ್ಟಾö್ಯಟಿಸ್ಟಿಕ್ ಸರ್ವೆಲೆನ್ಸ್ಸ್ ತಂಡ, 1 ವಿಡಿಯೋ ಸರ್ವೆಲೆನ್ಸ್ಸ್, 1 ವಿಡಿಯೋ ವೀವಿಂಗ್ ಹಾಗೂ ಒಂದು ಸಿ- ವಿಜಿಲ್ ತಂಡ ಕಾರ್ಯನಿರ್ವಹಿಸಲಿದೆ ಎಂದರು.
ರಾಜಕೀಯ ಪಕ್ಷಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಚುನಾವಣಾ ಪ್ರಚಾರಕ್ಕೆ ಸಂಬoಧಿಸಿದ ಸಭೆ, ಕಾರ್ಯಕ್ರಮಗಳಿಗೆ ಸುಗಮವಾಗಿ ಅನುಮತಿ ನೀಡುವ ಕುರಿತು ಸಿಂಗಲ್ ವಿಂಡೋ ಕಮಿಟಿ ರಚಿಸಲಾಗಿದೆ. ಜೊತೆಗೆ ಸಾರ್ವಜನಿಕರಿಂದ ಸ್ವೀಕೃತ ದೂರುಗಳನ್ನು ಸ್ವೀಕರಿಸಲು 24*7 ಕಂಟ್ರೋಲ್ ರೂಮ್ ತೆರೆಯಲಾಗಿದ್ದು, 08385- 223722 ದೂರವಾಣಿಗೆ ಕರೆ ಮಾಡಿ ದೂರು ನೀಡಬಹುದು. ಕ್ಷೇತ್ರದಲ್ಲಿ ಸುಮಾರು 124 ಮತಗಟ್ಟೆಯಲ್ಲಿ ವೆಬ್ ಕಾಸ್ಟಿಂಗ್ ನಡೆಯಲಿದ್ದು, ಮತದಾನದ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ವೀಕ್ಷಿಸಲಿದೆ ಎಂದರು. ಶಾಂತಿಯುತ ಚುನಾವಣೆಗೆ ಸಿ.ಎ.ಪಿ.ಎಫ್. ತಂಡಗಳನ್ನು ನಿಯೋಜಿಸಲಾಗಿದ್ದು, ಏ.1ರಿಂದ ಕಾರ್ಯನಿರ್ವಹಿಸಲಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ತಿಪ್ಪೇಸ್ವಾಮಿ, ಡಿವೈಎಸ್ಪಿ ಶ್ರೀಕಾಂತ ಕೆ. ಇದ್ದರು.