Slide
Slide
Slide
previous arrow
next arrow

ಚುನಾವಣೆಯಲ್ಲಿ ಆಳ್ವಾ ಸ್ಪರ್ಧೆ ವಿಚಾರ: ಕಾಂಗ್ರೆಸ್ ಕಾರ್ಯಕರ್ತರಿಂದ ವ್ಯಾಪಕ ವಿರೋಧ

300x250 AD

ಕುಮಟಾ: ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಚುನಾವಣಾ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ನಿವೇದಿತ್ ಆಳ್ವಾ ಅವರಿಗೆ ಕ್ಷೇತ್ರದ ಟಿಕೆಟ್ ನೀಡುವ ಬಗ್ಗೆ ಕಾರ್ಯಕರ್ತರಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು.

ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಕುಮಟಾ ಕ್ಷೇತ್ರದಿಂದ ನಿವೇದಿತ್ ಆಳ್ವಾ ಅವರಿಗೆ ಟಿಕೆಟ್ ನೀಡುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಅವರು ಕೂಡ ಒಬ್ಬ ಆಕಾಂಕ್ಷಿಯಾಗಿದ್ದಾರೆ ಎಂಬ ಸುದ್ದಿ ಕಾರ್ಯಕರ್ತರಲ್ಲಿ ಬೇಸರ ಮೂಡಿಸುವ ಜೊತೆಗೆ ಒಂದು ಹಂತದಲ್ಲಿ ಅವರಿಗೆ ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್ ಮೇಲೂ ಒತ್ತಡ ಇದೆ ಎನ್ನಲಾಗುತ್ತಿದೆ. ಈ ವಿಷಯ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಕ್ಷೇತ್ರದಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ನೀಡುವ ಬದಲೂ ಈ ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿಗೆ ಟಿಕೆಟ್ ನೀಡುವುದು ಎಷ್ಷರಮಟ್ಟಿಗೆ ಸರಿ..? ಇಷ್ಟು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದವರಿಗೆ ಕಿಮ್ಮತ್ತಿಲ್ಲವೇ..? ಎಂದು ಪ್ರಶ್ನಿಸಿದ ಕಾರ್ಯಕರ್ತರು, ಒಂದು ವೇಳೆ ಕಾರ್ಯಕರ್ತರ ಅಭಿಪ್ರಾಯಕ್ಕೆ ಬೆಲೆ ನೀಡದೇ ನಿವೇದಿತ್ ಆಳ್ವಾ ಅವರಿಗೆ ಟಿಕೆಟ್ ನೀಡಿದರೆ, ನಾವೆಲ್ಲ ಕಾರ್ಯಕರ್ತರು ಚುನಾವಣೆಯಿಂದ ಹಿಂದಕ್ಕೆ ಸರಿಯುತ್ತೇವೆ ಎಂದು ಮುಖಂಡರಿಗೆ ಎಚ್ಚರಿಕೆ ನೀಡಿದರು.

ದಶಕಗಳ ಕಾಲ ಕ್ಷೇತ್ರದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿ, ಪಕ್ಷದಲ್ಲಿ ಮುಖಂಡರಾಗಿ ಗುರುತಿಸಿಕೊಂಡ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಲ್ಲಿ ಸಮರ್ಥರನ್ನು ಆಯ್ಕೆ ಮಾಡಿ ಟಿಕೆಟ್ ನೀಡಿದರೆ ಮಾತ್ರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯ. ಯಾರದೋ ಒತ್ತಡಕ್ಕೆ, ಓಲೈಕೆಗೆ ಮಣಿದು ಆಳ್ವಾರಿಗೆ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮಣ್ಣುಕಚ್ಚುವುದು ಶತಸಿದ್ಧ. ಹೈ ಕಮಾಂಡ್ ಅಂಥ ತಪ್ಪು ನಿರ್ಧಾರ ಕೈಗೊಳ್ಳದಂತೆ ಎಐಸಿಸಿ ಮತ್ತು ಕೆಪಿಸಿಸಿ ಮುಖಂಡರು ಎಚ್ಚರ ವಹಿಸಬೇಕು. ಯಾವುದೇ ಕಾರಣಕ್ಕೂ ಕ್ಷೇತ್ರಕ್ಕೆ ಸಂಬಂಧವಿರದ ಮತ್ತು ಇಲ್ಲಿನ ಜನರ ಸುಖ, ದುಃಖಗಳಿಗೆ ಸ್ಪಂದಿಸದ ಆಕಾಂಕ್ಷಿಗಳಿಗೆ ಟಿಕೆಟ್ ನೀಡಬಾರದು ಎಂದು ಕಾರ್ಯಕರ್ತರು ಕಡ್ಡಿ ತುಂಡುಮಾಡುವಂತೆ ಹೇಳಿದರು.

300x250 AD

ಅಲ್ಲದೇ ಶಿರಸಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾದ ನಿವೇದಿತ್ ಆಳ್ವಾ ಅವರ ತಲೆ ಕೆಡಿಸಿ, ಈ ಕ್ಷೇತ್ರಕ್ಕೆ ಕರೆತಂದ ಕೆಲ ಟಿಕೆಟ್ ಆಕಾಂಕ್ಷಿಗಳು ಮತ್ತು ಮುಖಂಡರ ವಿರುದ್ಧವೂ ಕಾರ್ಯರ್ತರು ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಕೈಲಾಗದವರು ಕೊನೆ ಘಳಿಗೆಯಲ್ಲಿ ಕನ್‌ಪ್ಯೂಸ್ ಮಾಡುವಂತೆ ಕಾರ್ಯಕರ್ತರಲ್ಲೂ ಗೊಂದಲ ಮೂಡಿಸಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಬಲ ಕುಸಿಯಲು ಕೆಲ ಕಾಂಗ್ರೆಸ್ ಮುಖಂಡರೇ ಕಾರಣರಾಗಿರುವುದು ಪಕ್ಷದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ ಎಂದು ಕಾರ್ಯಕರ್ತರು ಬೇಸರಿಸಿದರು. ಬಳಿಕ ವೇದಿಕೆಯಲ್ಲಿರುವ ಕೆಲ ಟಿಕೆಟ್ ಆಕಾಂಕ್ಷಿಗಳು ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದಾರೆ. ನಂತರ ಈ ಚುನಾವಣಾ ಅಭಿಪ್ರಾಯ ಸಂಗ್ರಹ ಸಭೆಯನ್ನು ಮುಂದೂಡಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುವ ಯುವಧ್ವನಿ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು.

ಈ ಸಭೆಯಲ್ಲಿ ಕಾಂಗ್ರೆಸ್‌ನ ಚುನಾವಣಾ ಸಂಯೋಜಕ ನಾಗರಾಜ ಮಡಿವಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ, ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ, ಪ್ರಮುಖರಾದ ಮಂಜುನಾಥ ನಾಯ್ಕ, ರವಿಕುಮಾರ ಶೆಟ್ಟಿ, ಭುವನ ಭಾಗ್ವತ್, ಹೊನ್ನಪ್ಪ ನಾಯಕ, ರಾಮಾನಂದ ನಾಯಕ ಅಂಕೋಲಾ, ಗಾಯತ್ರಿ ಗೌಡ, ಆರ್.ಎಚ್.ನಾಯ್ಕ ಬಾಡ, ಸುರೇಖಾ ವಾರೇಕರ್, ವಿನಯಾ ಜಾರ್ಜ್, ಕೃಷ್ಣಾನಂದ ವೆರ್ಣೇಕರ್, ಗಣೇಶ ಶೆಟ್ಟಿ ಇತರರು ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top