ಕಾರವಾರ: ತಾಲ್ಲೂಕಿನ ಶಿರವಾಡ ಗ್ರಾಪಂ ವ್ಯಾಪ್ತಿಯ ಕೋಣಮಕ್ಕಿಯ ಶ್ರೀ ಹುಲಿದೇವರ ವಾರ್ಷಿಕ ಜಾತ್ರಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ಜಾತ್ರೆಯ ನಿಮಿತ್ತ ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ಹೋಮ, ಪುಷ್ಪಾಲಂಕಾರ, ಪೂಜೆಗಳು ನೆರವೇರಿದವು. ಇನ್ನು ಇದೇ ವೇಳೆ ನೂತನವಾಗಿ ಸಿದ್ಧಪಡಿಸಲಾದ ಬೆಳ್ಳಿಯ ಕವಚ ಹಾಗೂ ಪಂಚಲೋಹದ ಪ್ರಭಾವಳಿಯನ್ನು ಪೂಜಿಸಿ ಶ್ರೀ ಹುಲಿದೇವರಿಗೆ ಅರ್ಪಿಸಲಾಯಿತು.
ಮಧ್ಯಾಹ್ನ ಪೂಜೆ, ಆರತಿ ಭಕ್ತರಿಂದ ಹಣ್ಣು ಕಾಯಿ ಸೇವೆ, ಹರಕೆ ಸಲ್ಲಿಕೆ ಕಾರ್ಯಗಳು ನೆರವೇರಿದವು. ಸಂಜೆ 4 ಗಂಟೆಗೆ ಶ್ರೀ ಹುಲಿದೇವರಿಗೆ ಮಹಾಪೂಜೆ, ಮಹಾ ಮಂಗಳಾರತಿ ನಡೆದು ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಕಾರ್ಯ ನೆರವೇರಿತು. ಈ ಎಲ್ಲ ಧಾರ್ಮಿಕ ಕೈಂಕರ್ಯಗಳಲ್ಲಿ ಶ್ರೀ ಹುಲಿದೇವಸ್ಥಾನ ಆಡಳಿತ ಕಮಿಟಿಯ ಅಧ್ಯಕ್ಷರು, ಉಪಾಧ್ಯಕ್ಷರು, ಅರ್ಚಕರು ಹಾಗೂ ಊರ ನಾಗರಿಕೆರು ಸೇರಿ ನೂರಾರು ಮಂದಿ ಪಾಲ್ಗೊಂಡಿದ್ದರು.