ದಾಂಡೇಲಿ: ಸಾಕ್ಷಿ ಪ್ರಕಾಶನದ ಆಶ್ರಯದಡಿ ನಗರದ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ ಉಪನ್ಯಾಸಕ ದಂಪತಿ ಪ್ರವೀಣ ನಾಯಕ ಹಿಚಕಡ್ ಅವರ ‘ಈ ಸಮಯ ಕಳೆದು ಹೋಗುತ್ತದೆ’ ಹಾಗೂ ನಾಗರೇಖಾ ಗಾಂವಕರ ಅವರ ‘ಬಣ್ಣದ ಕೊಡೆ’ ಕೃತಿಗಳ ಲೋಕಾರ್ಪಣೆ ಸಮಾರಂಭ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಹರೆ ವೇದಿಕೆಯ ಅಧ್ಯಕ್ಷರು ಹಾಗೂ ವಕೀಲ ನಾಗರಾಜ ನಾಯಕ, ದಂಪತಿಗಳು ಸೇರಿ ಸಾಹಿತ್ಯ ಕೃಷಿಯಲ್ಲಿ ತೊಡಗಿರುವುದು ಅಭಿನಂದನೀಯ ಕಾರ್ಯ. ಕನ್ನಡ ಸಾರಸ್ವತ ಲೋಕಕ್ಕೆ ತನ್ನದೇ ಆದ ರೀತಿಯಲ್ಲಿ ಪ್ರವೀಣ ನಾಯಕ ಮತ್ತು ನಾಗರೇಖಾ ಗಾಂವಕರ ಅವರು ಕೊಡುಗೆ ನೀಡುತ್ತಾ ಬಂದಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಸಾಹಿತ್ಯ ಕ್ಷೇತ್ರದಲ್ಲಿ ಮಾಡುವ ಕಾರ‍್ಯ ಸದಾ ಸ್ಮರಣೀಯವಾಗುತ್ತದೆ. ಕನ್ನಡ ಸಾಹಿತ್ಯ ಸೇವೆ ಅದೊಂದು ನಾಡು ಕಟ್ಟುವ ಸೇವೆಯಾಗಿದ್ದು, ಇಂಥ ನೂರಾರು ಕೃತಿಗಳು ಪ್ರವೀಣ ನಾಯಕ ದಂಪತಿಗಳಿಂದ ಹೊರ ಬಂದು ಕನ್ನಡ ಸಾರಸ್ವತ ಲೋಕ ಮತ್ತಷ್ಟು ಬೆಳಗಲಿ ಎಂದು ಶುಭ ಹಾರೈಸಿದರು.
ಪ್ರವೀಣ ನಾಯಕ ಹಿಚಕಡ್ ಅವರ ‘ಈ ಸಮಯ ಕಳೆದು ಹೋಗುತ್ತದೆ’ ಕೃತಿಯನ್ನು ಬೆಂಗಳೂರಿನ ಕನ್ನಡ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ.ಗೀತಾ ಡಿ.ಸಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಸ್ವಚ್ಛ- ಸುಂದರ ದಟ್ಟ ಕಾಡಿನ ನಡುವಿನ ದಾಂಡೇಲಿ ನಗರದಲ್ಲಿ ಕೃತಿ ಬಿಡುಗಡೆ ಮಾಡಲು ಅತೀವ ಆನಂದವಾಗುತ್ತದೆ. ಸಮಾಜಕ್ಕೆ ಉಪಯುಕ್ತ ಕೊಡುಗೆಯಾಗುವ ನಿಟ್ಟಿನಲ್ಲಿ ಪ್ರವೀಣ ನಾಯಕ ಕುಟುಂಬ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡಿದೆ. ಈ ಸೇವೆ ಸದಾ ಸ್ಮರಣೀಯವಾಗಲಿದೆ ಎಂದರು.
ನಾಗರೇಖಾ ಗಾಂವಕರ ಅವರ ‘ಬಣ್ಣದ ಕೊಡೆ’ ಕೃತಿ ಅನಾವರಣಗೊಳಿಸಿ ಮಾತನಾಡಿದ ಹಾಸನದ ಆಕಾಶವಾಣಿ ಕೇಂದ್ರದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕವಿ ನೂತನ ದೋಶೆಟ್ಟಿ, ವೃತ್ತಿ ಬದುಕಿನ ನಡುವೆ ಸಾಹಿತ್ಯದ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ನಾಗರೇಖಾ ಗಾಂವಕರ ಅವರು ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಶಕ್ತಿಯಾಗಲಿದ್ದಾರೆ. ಈಗಾಗಲೆ ಹಲವಾರು ಸೃಜನಶೀಲ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ ಹೆಗ್ಗಳಿಕೆಯನ್ನು ನಾಗರೇಖಾ ಗಾಂವಕರ್ ಅವರು ಹೊಂದಿದ್ದಾರೆ. ಅವರಿಂದ ಇನ್ನಷ್ಟು ಸಾಹಿತ್ಯ ಕೃತಿಗಳು ಹೊರಬರಲಿ, ನಾಡಿನ ಸಾಹಿತ್ಯ ಕ್ಷೇತ್ರ ಇನ್ನಷ್ಟು ಶ್ರೀಮಂತಗೊಳ್ಳಲಿ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ನಾಗರೇಖಾ ಗಾಂವಕರ್ ಮತ್ತು ಪ್ರವೀಣ ನಾಯಕ ಅವರು ಉತ್ಸಾಹದ ಚಿಲುಮೆಗಳಿದ್ದಂತೆ. ಸದಾ ಕ್ರಿಯಾಶೀಲತೆಯನ್ನು ಮೈಗೂಡಿಸಿ ಆದರ್ಶ ಸಾಹಿತ್ಯ ದಂಪತಿಗಳಾಗಿ ಗಮನ ಸೆಳೆದಿದ್ದಾರೆ. ಮನೆಯಲ್ಲಿಬ್ಬರು ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡರೇ ಇಡೀ ಸಂಸಾರವೆ ಸಾಹಿತ್ಯದ ಆರಾಧನೆಯಲ್ಲಿ ತೊಡಗಿಸಿಕೊಳ್ಳುತ್ತದೆ ಪ್ರವೀಣ ನಾಯಕ ಕುಟುಂಬವೆ ಪ್ರತ್ಯಕ್ಷ ಉದಾಹರಣೆ. ಇವರ ನಾಡು ನುಡಿ ಸೇವೆಯನ್ನು ಕಸಾಪ ಸದಾ ಅಭಿನಂದಿಸುತ್ತದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ನಾರಾಯಣ ನಾಯ್ಕ ಸಂದರ್ಭೋಚಿತವಾಗಿ ಮಾತನಾಡಿ, ನೂತನ ಕೃತಿಗಳಿಗೆ ಶುಭ ಹಾರೈಸಿದರು. ಸೃಷ್ಟಿ ನಾಯಕ ಪ್ರಾರ್ಥನೆ ಹಾಡಿದರು. ಪ್ರವೀಣ ನಾಯಕ ಹಿಚಕಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರೇಖಾ ಗಾಂವಕರ ಸ್ವಾಗತಿಸಿದರು. ಲೇಖಕಿ ಅಶ್ವಿನಿ ಸಂತೋಷ್ ಶೆಟ್ಟಿ ವಂದಿಸಿದರು. ಜಲಜಾ ವಾಸರೆ ಕಾರ್ಯಕ್ರಮ ನಿರೂಪಿಸಿದರು.