Slide
Slide
Slide
previous arrow
next arrow

ಮಾದರಿ ಶಾಲೆ ಮೈದಾನದ ಸ್ವಚ್ಛತೆ ವಿಚಾರ; ಪಾಲಕರು- ಎಸ್‌ಡಿಎಂಸಿ ಮಧ್ಯೆ ವಾಗ್ವಾದ

300x250 AD

ಯಲ್ಲಾಪುರ: ಹಬ್ಬ ಮುಗಿದರು, ಹಬ್ಬದ ಸಿಹಿ ಮುಗಿದಿಲ್ಲ ಎನ್ನುವಂತೆ ಯಲ್ಲಾಪುರ ಜಾತ್ರೆ ಮುಗಿದು ಕೆಲವು ದಿನ ಕಳೆದರೂ ಜಾತ್ರೆಯಲ್ಲಿ ನಡೆದ ಘಟನೆಗಳು ಮತ್ತೆ ಮತ್ತೆ ಬೇರೆ ಬೇರೆ ಧ್ವನಿಗಳಲ್ಲಿ ಪ್ರತಿದ್ವನಿಸುತ್ತಿವೆ. ಬಸ್ ನಿಲ್ದಾಣದ ಎದುರಿನ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದ ಸ್ವಚ್ಛತೆಗೆ ಸಂಬಂಧಿಸಿದಂತೆ ಮಂಗಳವಾರ ಬೆಳಿಗ್ಗೆ ಪಾಲಕರು ಹಾಗೂ ಎಸ್ಡಿಎಂಸಿ ಸದಸ್ಯರ ಮಧ್ಯೆ ವಾಗ್ವಾದ ನಡೆದಿದೆ.
ಮಾದರಿ ಶಾಲೆಯ ಮೈದಾನವನ್ನು ಒಂಬತ್ತು ದಿನಗಳ ಜಾತ್ರೆಗಾಗಿ ಟೆಂಡರ್ ಕರೆದು ಬಹಿರಂಗ ಹರಾಜು ಮಾಡಲಾಗಿತ್ತು. ಸುಮಾರು 15ರಿಂದ 16 ಲಕ್ಷ ರೂಪಾಯಿಗೆ ಸ್ಥಳ ಹರಾಜು ಆಗಿತ್ತು. ಜಾತ್ರೆ ಮುಗಿದು ಮೈದಾನದಲ್ಲಿ ಹಾಕಿರುವ ಅಮ್ಮ್ಯೂಜ್ಮೆಂಟ್ ಪಾರ್ಕ್ನ ಸಾಮಗ್ರಿಗಳನ್ನೆಲ್ಲ ಗುತ್ತಿಗೆ ಪಡೆದವರು ತೆಗೆದುಕೊಂಡು ಹೋಗಿದ್ದಾರೆ. ಜಾತ್ರೆಗೆ ಹಾಗೂ ಅಮ್ಮ್ಯೂಜ್ಮೆಂಟ್ ಪಾರ್ಕ್ಗೆ ಬಂದವರು ಎಸೆದಿರುವ ತ್ಯಾಜ್ಯಗಳನ್ನು ಸೋಮವಾರದಂದು ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಕೆಲವು ಜನ ಸ್ವಚ್ಛ ಮಾಡುತ್ತಿದ್ದರು, ಈ ಸಂದರ್ಭದಲ್ಲಿ ಕೆಲ ವಿದ್ಯಾರ್ಥಿಗಳನ್ನು ಸೇರಿಸಿಕೊಂಡಿದ್ದರು ಎಂದು ಪಾಲಕರ ಆಪಾದನೆಯಾಗಿದೆ.
15ರಿಂದ 16 ಲಕ್ಷ ರೂಪಾಯಿ ಟೆಂಡರ್ ಕರೆದು ಅದರಲ್ಲಿ 2- 3 ಸಾವಿರ ರೂಪಾಯಿ ಹಣದಲ್ಲಿ ಮೈದಾನವನ್ನು ಪೌರಕಾರ್ಮಿಕರು ಅಥವಾ ಇನ್ನಿತರ ಕಾರ್ಮಿಕರನ್ನು ಬಳಸಿ ಸ್ವಚ್ಛ ಮಾಡಿಸುವ ಬದಲು, ಮಕ್ಕಳನ್ನು ಬಳಸಿ ಸ್ವಚ್ಛ ಮಾಡಿದ್ದಾರೆ ಎಂದು ಕೆಲವೊಂದು ಪಾಲಕರು ಮಂಗಳವಾರ ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಬಿಡುವ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರ ಜೊತೆ ವಾಗ್ವಾದದಲ್ಲಿ ತೊಡಗಿಸಿಕೊಂಡರು. ಎಸ್ಡಿಎಂಸಿಯವರು 15 ರಿಂದ 16 ಲಕ್ಷ ಹಣವನ್ನು ತಿಂದಿದ್ದಾರೆ ಎನ್ನುವ ಮಾತುಗಳು ಈ ಸಂದರ್ಭದಲ್ಲಿ ಪಾಲಕರಿಂದ ಕೇಳಿ ಬಂದವು ಎಂದು ಎಸ್ಡಿಎಂಸಿ ಸದಸ್ಯರೊಬ್ಬರು ಆರೋಪಿಸುತ್ತಾರೆ. ಆ ಹಣವನ್ನು ಎಲ್ಲಿ ನಾವು ತಿಂದಿದ್ದೇವೆ ಎನ್ನುವುದನ್ನು ಸಾಬೀತುಪಡಿಸಿ ಎಂದು ಎಸ್‌ಡಿಎಂಸಿ ಕೆಲ ಸದಸ್ಯರು ಪಾಲಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಯಲ್ಲಾಪುರ ಜಾತ್ರೆಯ ನಿಮಿತ್ತ ಖಾಸಗಿ ಶಿಕ್ಷಣ ಸಂಸ್ಥೆಯ ಆವಾರಗಳು ಕೂಡ ಅಮ್ಮ್ಯೂಜ್ಮೆಂಟ್ ಪಾರ್ಕ್, ಇನ್ನಿತರ ಜಾತ್ರೆ ವ್ಯಾಪಾರಕ್ಕೆ ಬಾಡಿಗೆಗೆ ನೀಡಲಾಗಿತ್ತು, ಖಾಸಗಿ ಸಂಸ್ಥೆಯವರು ತಮ್ಮ ಸಂಸ್ಥೆಯ ವಿದ್ಯಾರ್ಥಿಗಳನ್ನು ಸ್ವಚ್ಛತೆಗೆ ಬಳಸಿಕೊಂಡಿಲ್ಲ ಬಳಸಿಕೊಳ್ಳುತ್ತಿಲ್ಲ ಎನ್ನುವುದು ಪಾಲಕರ ವಾದ. ಆದರೆ ಸರ್ಕಾರಿ ಶಾಲೆಯಲ್ಲಿ ಹೀಗೆ ಯಾಕೆ ಎಂಬುದು ಅವರ ಪ್ರಶ್ನೆಯಾಗಿದೆ. ಸರ್ಕಾರಿ ಶಾಲೆಯ ಮಕ್ಕಳು ಎಂದರೆ ಅಷ್ಟೊಂದು ನಿಕೃಷ್ಟವೇ ಎಂಬುದು ಪಾಲಕರ ಪ್ರಶ್ನೆಯಾಗಿದೆ.
ಒಂದುವೇಳೆ ಶಾಲಾ ಮಕ್ಕಳನ್ನು ಬಳಸಿಕೊಂಡು ಮೈದಾನವನ್ನು ಸ್ವಚ್ಛ ಮಾಡಿರುವುದು ಸತ್ಯ ಆಗಿದ್ದರೆ ಇದು ಸರಿಯಾದ ಮಾರ್ಗವಲ್ಲ, ಶಾಲಾ ಆವರಣದಲ್ಲಿ ಮಲ ಮೂತ್ರ ವಿಸರ್ಜನೆ ಮಾಡಲಾಗಿದೆ. ಇತ್ತೀಚೆಗೆ ಹರಡುತ್ತಿರುವ ಶೀತ ಜ್ವರದ ಸೋಂಕು ಹೊಂದಿರುವ ಹಲವಾರು ಜನ ಕೆಮ್ಮಿ ಸೀನಿ ಅದನ್ನು ಆವಾರದಲ್ಲಿಯೇ ಉಗುಳಿದ್ದಾರೆ. ಇಂತಹ ಕಡೆಗಳಲ್ಲಿ ಮಕ್ಕಳು ಹಾಗೂ ಎಸ ಡಿಎಂಸಿ ಅವರು ಕೈ ಹಾಕುವ ಪೂರ್ವದಲ್ಲಿ ಕೈಗವಸ, ಮಾಸ್ಕ್ ಮುಂತಾದವುಗಳನ್ನು ಧರಿಸಿ ಮುಂಜಾಗ್ರತೆ ವಹಿಸಬೇಕಿತ್ತು, ಅದಕ್ಕಾಗಿಯೇ ನೇಮಕವಾಗಿರುವ ಪರಿಣಿತರು ಯಲ್ಲಾಪುರದಲ್ಲಿದ್ದಾರೆ. ಅವರಿಂದ ಕೆಲಸ ಮಾಡಿಸಿಕೊಳ್ಳಬಹುದಾಗಿತ್ತು, ಮಕ್ಕಳನ್ನು ಸ್ವಚ್ಛತೆಗೆ ಕಳಿಸುವಾಗ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಜಾಗೃತಿ ವಹಿಸಬೇಕಾಗಿತ್ತು. ಹಾಗೆಯೇ ಟೆಂಡರ್ ನಲ್ಲಿ ಬಂದ ಹಣ ಎಸ್ಡಿಎಂಸಿಯವರು ತಿಂದರೆ ಎನ್ನುವುದು ಕೂಡ ಗಂಭೀರ ಆಪಾದನೆಯಾಗಿದ್ದು, ಸಾರ್ವಜನಿಕವಾಗಿ ಪ್ರಶ್ನಿಸುವ ಬದಲು ಸಂಶಯಗಳಿದ್ದರೆ ಶಾಲಾ ದಾಖಲೆಗಳು ಟೆಂಡರ್‌ಗಳನ್ನು ಎಸ್ಡಿಎಂಸಿ ಅಥವಾ ಪಾಲಕರ ಸಭೆಯಲ್ಲಿ ಪ್ರಶ್ನಿಸಿ ಸಂಶಯ ನಿವಾರಣೆ ಮಾಡಿಕೊಳ್ಳಬಹುದಾಗಿತ್ತು. ಏನೇ ಇದ್ದರೂ ಕೂಡ ನಾಲ್ಕು ಗೋಡೆ ಮಕ್ಕಳ ಮಧ್ಯೆ ಪಾಲಕರು, ಎಸ್‌ಡಿಎಮ್‌ಸಿಯವರ ಬಗೆಹರಿಸಿಕೊಳ್ಳಬಹುದಾದ ವಿಷಯ ಬೀದಿರಂಪವಾಗಿ ಹತ್ತಾರು ಜನ ನೋಡುವಂತಾಗಿರುವುದು ಬೇಸರದ ಸಂಗತಿಯಾಗಿದೆ.

300x250 AD
Share This
300x250 AD
300x250 AD
300x250 AD
Back to top