ಮುಂಡಗೋಡ: ಹೆಣ್ಣು ಶಕ್ತಿಯ ಪ್ರತಿರೂಪ ಎನ್ನುವ ಮಾತು ಪ್ರತಿ ಕ್ಷೇತ್ರದಲ್ಲೂ ಸಾಬೀತಾಗುತ್ತಲೇ ಬಂದಿದೆ. ಆಕೆ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಿಬಿಡುತ್ತಾಳೆ ಎಂಬುದಕ್ಕೆ ಜ್ಯೋತಿ ಸೂರೆಬಾನ್ ಸಾಕ್ಷಿ.
ತಾಲೂಕಿನ ಪಾಳಾ ಗ್ರಾಮ ಪಂಚಾಯತ್‌ಕ್ಕೆ ಸೇರಿದ 28 ಹರೆಯದ ಹೆಣ್ಣುಮಗಳು. ಮದುವೆಯಾಗಿ 2-3 ವರುಷ ಚೆನ್ನಾಗಿಯೇ ಇದ್ದ ಗಂಡ ಕಾಲ ಕಳೆಯುತ್ತ ಮದ್ಯದ ಅಮಲಿನಲ್ಲಿ ತೇಲಾಡಲು ಶುರುಮಾಡಿದ. ದಿನದಿಂದ ದಿನಕ್ಕೆ ಕುಡಿತ ಹೆಚ್ಚುತ್ತಲೆ ಹೋಯಿತು. ಮೂಲತಃ ಗಾರೆ ಕೆಲಸ ಮಾಡುತ್ತಿದ್ದ ಈತ ದಿನಪೂರ್ತಿ ಮದ್ಯದ ಮೊರೆ ಹೋದ. ಈ ಕಡೆ ಜ್ಯೋತಿ ತನ್ನ ಸಂಸಾರದ ಭಾರವನ್ನು ಹೊರಲು ಮುಂದಾದಳು. ಇಬ್ಬರು ಗಂಡು ಮಕ್ಕಳ ಜವಾಬ್ದಾರಿಯೊಂದಿಗೆ ಮನೆಯ ಜವಾಬ್ದಾರಿಯು ಇವಳ ಹೆಗಲಿಗೆ ಬಿತ್ತು. ಹೀಗಾಗಿ ಅವರಿವರ ಹೊಲಗಳಿಗೆ ಹೋಗಿ ಕೂಲಿ ಮಾಡಿ ನೀಡಿದ ಅಲ್ಪ ಹಣದಲ್ಲಿ ಜೀವನ ನಿರ್ವಹಿಸಲು ಕಷ್ಟಪಡುತ್ತಿದ್ದಾಗ ಈಕೆಯ ಸಹಾಯಕ್ಕೆ ನಿಂತಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ.
ಗಾರೆ ಕೆಲಸ ಮಾಡಿ ದಿನಕ್ಕೆ 800ರೂ ದುಡಿಯುತ್ತಿದ್ದ ಜ್ಯೋತಿಯವರ ಗಂಡ ಒಂದೇ ಒಂದು ರೂಪಾಯಿಯನ್ನು ಸಂಸಾರಕ್ಕೆ ನೀಡುತ್ತಿರಲಿಲ್ಲ. ಬದಲಾಗಿ ಜ್ಯೋತಿಯೇ ಖಾತರಿ ಯೋಜನೆಯಡಿ ಕೈಗೊಂಡ ಕೆರೆ ಹೂಳೆತ್ತುವುದು, ಹೊಸ ಕೆರೆ ನಿರ್ಮಾಣ, ಕಾಲುವೆ ನಿರ್ಮಾಣ ಹಾಗೂ ಇನ್ನಿತರ ಸಾರ್ವಜನಿಕ ಕಾಮಗಾರಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಳೆದ ಆರ್ಥಿಕ ವರ್ಷದಲ್ಲಿ ನೂರು ದಿನಗಳ ಕೆಲಸ ಪಡೆದು ಸೈ ಎನಿಸಿದ್ದಾರೆ. ಮದುವೆಯಲ್ಲಿ ಅಪ್ಪ ಅಮ್ಮ ನೀಡಿದ ಒಡವೆಗಳೆಲ್ಲವೂ ಗಂಡನ ಕುಡಿತದ ಚಟಕ್ಕೆ ಬಲಿಯಾದವು. ಮನೆ ಬಾಡಿಗೆ ಕಟ್ಟಲಾಗದೇ ಅಪ್ಪ ಅಮ್ಮನ ಆಸರೆ ಬೇಡಿದೆ. ಹೊಟ್ಟೆ ಪಾಡಿಗೆ ಖಾತರಿ ಕೆಲಸಕ್ಕೆ ಮುಂದಾದೆ. ಜೊತೆಗೆ ಅಪ್ಪನೊಂದಿಗೆ ಗಾರೆ ಕೆಲಸದಲ್ಲಿಯೂ ನೆರವಾದೆ. ನರೇಗಾ ಯೋಜನೆ ನಮ್ಮಂತ ಅದೆಷ್ಟೋ ಹೆಣ್ಣುಮಕ್ಕಳಿಗೆ ಭಾಗ್ಯದ ಜ್ಯೋತಿಯಾಗಿದೆ ಎಂದುದು ಜ್ಯೋತಿ ಸೂರೆಬಾನ್ ಮನದಾಳದ ಮಾತುಗಳು.
ಸ್ವಾವಲಂಬನೆಯ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿರುವ ಜ್ಯೋತಿ ಅವರು ಅಂಬೇಡ್ಕರ್ ನಿವಾಸ್ ಯೋಜನೆಯಡಿ ಸಹಾಯಧನ ಪಡೆದು ತಾವು ದುಡಿದು ಕೂಡಿಟ್ಟ ಹಣದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುತ್ತಿದ್ದು, ದುಡಿದು ಜೀವನ ನಡೆಸುವ ಜೀವಗಳಿಗೆ ಮಾದರಿಯಾಗಿದ್ದಾರೆ.