ಕಾರವಾರ : ಕಾರವಾರ- ಅಂಕೋಲಾ ಕ್ಷೇತ್ರದ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ್ ತನಗೆ ಕಳೆದ ಕೆಲ ದಿನಗಳಿಂದ ಜೀವ ಬೆದರಿಕೆ ಇದೆ ಎನ್ನುವ ಆರೋಪವನ್ನು ಮಾಡಿದ್ದಾರೆ.
ರಾತ್ರಿ ಸಮಯದಲ್ಲಿ ಮನೆಯ ಎದುರಿನ ಬೀದಿ ದೀಪವನ್ನ ತೆಗೆದು ಹೆದರಿಸುತ್ತಾರೆ.ಹೊರಗಡೆ ಹೋಗಿರುವ ಸಂದರ್ಭದಲ್ಲಿ ಟ್ರಕ್ ತಂದು ನನ್ನ ವಾಹನಕ್ಕೆ ಹಾಯಿಸಲು ಯತ್ನಿಸುತ್ತಾರೆ. ಕಾರಿನಲ್ಲಿ ಫಾಲೋ ಮಾಡುವ ಘಟನೆ ಕೂಡ ನಡೆಯುತ್ತಿದೆ. ಅಷ್ಟೆ ಅಲ್ಲದೆ ನನ್ನ ಮತ್ತು ನನ್ನ ಅಕ್ಕನ ಮಗನ ಕಿಡ್ನಾಪ್ ಮಾಡಲು ಪ್ರಯತ್ನಿಸಲಾಗಿದೆ ಎಂದು ಹೇಳಿದ್ದಾರೆ.
ಈ ಹಿಂದಿನಿಂದಲ್ಲೂ ಇದನ್ನ ಮಾಡುತ್ತಿದ್ದು,ಅದನ್ನ ಈಗಲೂ ಮುಂದುವರೆಸಿದ್ದಾರೆ. ಆದರೆ ಮಾಡುತ್ತಿರುವವರು ಯಾರು ಏನು ಎನ್ನುವುದು ಇದುವರೆಗೂ ಗೊತ್ತಾಗುತ್ತಿಲ್ಲ. ಅನೇಕ ವಿರೋಧಿಗಳು ಇದ್ದಾರೆ. ಅಧಿಕಾರ ಸಿಕ್ಕಿಲ್ಲ ಎಂದು ಹತಾಶರಾದವರೂ ಇದ್ದಾರೆ. ಓರ್ವ ಮಹಿಳೆಯಾದ ನನ್ನ ಬೆಳವಣಿಗೆ ಹಾಗೂ ನಾನು ಶಾಸಕಿ ಆದ ಬಳಿ ಮಾಡಿರುವ ಅಭಿವೃದ್ಧಿ ಕೆಲಸವನ್ನ ನೋಡಿ ಸಹಿಸಿಕೊಳ್ಳಲಾಗದವರು ಇದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಗಮನಕ್ಕೆ ತರಲಾಗಿದ್ದು, ಭದ್ರತೆ ಪಡೆದುಕೊಂಡಿದ್ದೆನೆ. ಈ ಎಲ್ಲಾ ಘಟನೆಯ ಬಗ್ಗೆ ಗೃಹ ಸಚಿವರ ಗಮನಕ್ಕೆ ತಂದಿದ್ದು ಅವರೂ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ ಎಂದರು. ಈ ಬಗ್ಗೆ ಪ್ರಕರಣ ದಾಖಲಿಸುತ್ತೆನೆ.
ಬೆದರಿಕೆ ಹಾಕಿ ಓಡಿಸುವ ಪ್ರಯತ್ನವಿದ್ದರೆ ಅದು ವ್ಯರ್ಥ. ನಾನು ರಾಜಕೀಯ ಕ್ಷೇತ್ರದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಅವರು ಸಾಯಿಸಿದ್ರೆ ಸಾಯುವುದೇ. ಹಾಗೇ ಹಾರ್ಟ್ ಅಟ್ಯಾಕ್ ಬಂದ್ರೂ ಸಾಯುವುದೇ.ಸಾವು ಹೇಗಾದರೂ ಬಂದೇ ಬರುತ್ತದೆ. ಎಲ್ಲೋ ಒಂದು ಕಡೆ ಸಾಯುವುದು. ಆದರೆ ನಾನು ಏನು ಕೆಲಸ ಮಾಡಬೇಕೋ ಆ ಕೆಲಸ ಮಾಡಿ ಸಾಯುತ್ತೇನೆ ಎಂದು ಬೆದರಿಕೆ ಹಾಕಿರುವವರಿಗೆ ಶಾಸಕಿ ರೂಪಾಲಿ ನಾಯ್ಕ ತಿರುಗೇಟು ನೀಡಿದ್ದಾರೆ.