ಕಾರವಾರ: ಶಾಸಕಿ ರೂಪಾಲಿ ನಾಯ್ಕ ಅವರ ವಿರುದ್ಧ ರಾಜಕೀಯ ಸೇಡಿನಿಂದ ಹಲವು ವ್ಯಕ್ತಿಗಳು ಹಾಗೂ ಆಪಾದನೆ ಆರೋಪಗಳನ್ನು ಮಾಡುತ್ತಿದ್ದು, ಮಹಿಳಾ ಶಾಸಕರೊಬ್ಬರಿಗೆ ನೈತಿಕತೆಯ ಮಟ್ಟ ಮೀರಿ ಕಿರುಕುಳ ನೀಡುತ್ತಿರುವುದು ನಿಜಕ್ಕೂ ಖಂಡನೀಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹೇಳಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೆಲವು ಕ್ಷುಲ್ಲಕ ವಿಷಯಗಳನ್ನೇ ದೊಡ್ಡದನ್ನಾಗಿ ಮಾಡಿ ಶಾಸಕರ ವಿರುದ್ಧ, ಅದರಲ್ಲೂ ಮಹಿಳೆಯೊಬ್ಬರ ವಿರುದ್ಧ ಈ ರೀತಿಯಾಗಿ ವಾಗ್ದಾಳಿ ನಡೆಸುವುದು, ಅವರ ವೈಯಕ್ತಿಕ ವಿಚಾರಗಳನ್ನು ಕೆದಕುವುದು, ಅವರಿಗೆ ಸದಾ ಮಾನಸಿಕ ಕಿರುಕುಳವನ್ನು ನೀಡುತ್ತಿರುವುದು ವಿಷಾದನೀಯವಾಗಿದೆ. ಪಕ್ಷದ ಓರ್ವ ಜನಪ್ರತಿನಿಧಿಯಾಗಿ ಇದನ್ನು ಕಂಡು ನಾನು ಬೇಸರದಿಂದ ಪ್ರತಿಕ್ರಿಯೆಯನ್ನು ನೀಡುತ್ತಿದ್ದೇನೆ ಎಂದಿದ್ದಾರೆ. ರೂಪಾಲಿ ನಾಯ್ಕ ಅವರ ವಿರುದ್ಧ ಯಾವುದೇ ಆರೋಪಗಳಿದ್ದರೆ ಅದಕ್ಕೆ ಸಾಕ್ಷ್ಯವನ್ನು ಸಂಬಂಧಿತ ನ್ಯಾಯಾಲಯ ಅಥವಾ ಲೋಕಾಯುಕ್ತರ ಎದುರು ಹಾಜರುಪಡಿಸಬೇಕೆ ಹೊರತು ಅದನ್ನು ಪತ್ರಿಕೆಗಳಲ್ಲಿ ಅಥವಾ ಪತ್ರಿಕಾಗೋಷ್ಠಿಗಳ ಮೂಲಕ ತೇಜೋವಧೆ ಮಾಡಲು ಉಪಯೋಗಿಸಬಾರದು ಎಂದಿದ್ದಾರೆ.
ಶಾಸಕರನ್ನು ಅವಾಚ್ಯವಾದ ಶಬ್ದಗಳಿಂದ ಸಾರ್ವಜನಿಕವಾಗಿ ನಿಂದಿಸಿ ಅವರನ್ನು ಹೀಗಳೆಯುತ್ತಿರುವುದು ನಿಜಕ್ಕೂ ಖಂಡನೀಯ. ಆರೋಪ ಮಾಡುತ್ತಿರುವವರೆಲ್ಲ ತಾವು ಮಹಾ ಸಚ್ಚಾರಿತ್ರವಂತರು ಎಂಬಂತೆ ಈ ಆರೋಪಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ಕೆಲವೇ ಜನ ಇದನ್ನು ಉದ್ದೇಶಪೂರ್ವಕವಾಗಿ ಎರಡು ದಶಕಗಳಿಂದ ಕಾರವಾರದಲ್ಲಿ ಆಯ್ಕೆಯಾಗುವ ಪ್ರತಿ ಶಾಸಕರು ಹಾಗೂ ಜನಪ್ರತಿನಿಧಿಗಳ ವಿರುದ್ಧ ಮಾಡುತ್ತಿರುವುದು ನಿಜಕ್ಕೂ ಖಂಡನೀಯ. ಆರಂಭದಲ್ಲಿ ಇದೊಂದು ವೈಯಕ್ತಿಕ ವಿಚಾರ ಎಂಬ ಕಾರಣಕ್ಕೆ ಪಕ್ಷವಾಗಲಿ, ಪಕ್ಷದ ಕಾರ್ಯಕರ್ತರಾಗಲಿ ಈ ವಿಷಯದಲ್ಲಿ ಇಷ್ಟು ದಿನ ಮಧ್ಯಪ್ರವೇಶಿಸಿರಲಿಲ್ಲ. ಆದರೆ ಈಗ ಶಾಸಕರ ವಿರುದ್ಧ ಮಾಡುತ್ತಿರುವ ಆರೋಪಗಳು ರಾಜಕೀಯ ಕುತಂತ್ರದಿಂದ ಕೂಡಿದ್ದು, ಯಾವುದೇ ಬಲವಾದ ಸಾಕ್ಷವನ್ನು ನೀಡದೆ ಸುಮ್ಮನೆ ಆರೋಪಗಳನ್ನು ಮಾಡಲಾಗುತ್ತಿದೆ. ಇದು ಸಾರ್ವಜನಿಕರಲ್ಲಿ ತಪ್ಪು ಮಾಹಿತಿ ಹೋಗಲು ಸಹ ಕಾರಣವಾಗಿದೆ ಎಂದಿದ್ದಾರೆ.
ಈ ವಿಚಾರದಲ್ಲಿ ಪಕ್ಷವು ಹಾಗೂ ಪಕ್ಷದ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ರೂಪಾಲಿ ನಾಯ್ಕ ಅವರ ಪರವಾಗಿ ನಿಂತಿದ್ದು, ಆರೋಪ ಮಾಡುತ್ತಿರುವ ವ್ಯಕ್ತಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ಆದರೆ ಕಾಂಗ್ರೆಸ್ ಪಕ್ಷ ಎಂದು ಹೇಳಿಕೊಳ್ಳದೇ ಮುಖವಾಡ ಧರಿಸಿ ಯಾವುದನ್ನು ಕಾಂಗ್ರೆಸ್ ಮಾಡಲು ಸಾಧ್ಯವಿಲ್ಲವೋ ಅದನ್ನು ಈ ಜನ ಮಾಡುತ್ತಿದ್ದಾರೆ. ಇದೇ ಜನ ಈ ಹಿಂದೆ ಹಲವು ಬಾರಿ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಪರವಾಗಿ ಬಹಿರಂಗ ಪ್ರಚಾರ ಮಾಡಿದ್ದ ವ್ಯಕ್ತಿಗಳು ಎಂಬುದನ್ನು ಇಲ್ಲಿ ನಾನು ಉಲ್ಲೇಖಿಸಬಯಸುತ್ತೇನೆ. ಇಂತಹ ಸುಳ್ಳು ಆರೋಪಗಳಿಂದ ಪಕ್ಷ ಹಾಗೂ ಪಕ್ಷದ ಘನತೆಗೆ ಹೊಡೆತ ಬರುವಂತಹ ಈ ಕೆಲಸಗಳನ್ನು ಈ ಜನ ಮಾಡುತ್ತಿರುವುದರಿಂದ ರೂಪಾಲಿ ನಾಯ್ಕ ಅವರು ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸ್ವತಂತ್ರರಾಗಿದ್ದಾರೆ. ಆದರೆ ಭಾರತೀಯ ಜನತಾ ಪಾರ್ಟಿಯ ಓರ್ವ ಶಿಸ್ತಿನ ಸಿಪಾಯಿಯಾಗಿ ಹಾಗೂ ಜನಪ್ರತಿನಿಧಿಯಾಗಿ ನಾನು ಈ ಮಹಿಳಾ ಶಾಸಕರ ವಿರುದ್ಧ ನಡೆಯುತ್ತಿರುವ ಈ ವಾಗ್ದಾಳಿಯನ್ನು ಬಲವಾಗಿ ಖಂಡಿಸುತ್ತಿದ್ದೇನೆ ಎಂದಿದ್ದಾರೆ.
ಈ ವಿಷಯದಲ್ಲಿ ನಾನು ಹಾಗೂ ಪಕ್ಷ ರೂಪಾಲಿ ನಾಯ್ಕ ಅವರ ಜೊತೆಗಿದ್ದು, ಯಾವ ಕಾರಣಕ್ಕೂ ಅವರ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಿದರೆ ಅವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸುತ್ತೇನೆ. ಅಲ್ಲದೆ ಈ ಆರೋಪಗಳನ್ನು ಮಾಡುತ್ತಿರುವ ವ್ಯಕ್ತಿಗಳು ಕಳೆದ 20 ವರ್ಷಗಳಿಂದ ಯಾರು ಶಾಸಕರಾದರೂ ಅವರ ವಿರುದ್ಧ ಇದೇ ಆರೋಪವನ್ನು ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ನಾನು ಈ ಪ್ರಕರಣದಲ್ಲಿ ರೂಪಾಲಿ ನಾಯ್ಕ ಅವರಿಗೆ ನೈತಿಕವಾಗಿ ಹಾಗೂ ರಾಜಕೀಯವಾಗಿ ಬೆಂಬಲ ನೀಡುತ್ತಿದ್ದೇನೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿ ಅಥವಾ ಸಾರ್ವಜನಿಕರಲ್ಲಿ ಯಾವುದೇ ಸಂಶಯ ಬೇಡ ಎಂದು ಸ್ಪಷ್ಟಪಡಿಸುತ್ತಿದ್ದೇನೆ ಎಂದಿದ್ದಾರೆ.