ಕಾರವಾರ: ‘ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ’ ವೈಯಕ್ತಿಕ ಹಾಗೂ ಒಕ್ಕೂಟದ ವಿಭಾಗದಲ್ಲಿ 2022-23ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಜಿಲ್ಲೆಯಲ್ಲಿ ಉತ್ತಮ ಕಾರ್ಯ ಸಾಧನೆ ಮಾಡಿದಕ್ಕಾಗಿ ಜಿಲ್ಲೆಗೆ ಆರು (ರಾಜ್ಯದಲ್ಲೇ ಅತೀ ಹೆಚ್ಚು) ಪ್ರಶಸ್ತಿಗಳು ಲಭಿಸಿವೆ.
ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಜಿಲ್ಲೆಯಾದ್ಯಂತ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಗಳನ್ನು ಒಗ್ಗೂಡಿಸಿಕೊಂಡು ಎನ್‌ಆರ್‌ಎಲ್‌ಎಂ ಅಭಿಯಾನದಡಿ ಸರಕಾರದ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸುವುದರ ಜೊತೆಗೆ ಯಶಸ್ವಿಯಾಗಿ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿರುವ ವಿವಿಧ ಸ್ವಸಹಾಯ ಸಂಘಗಳ ಮಹಿಳಾ ಮಣಿಗಳನ್ನ ಹಾಗೂ ಅಧಿಕಾರಿಗಳನ್ನ ಗುರುತಿಸಿ, ಉತ್ತೇಜಿಸಿ ಗೌರವಿಸುವ ಹಿನ್ನಲೆಯಲ್ಲಿ ಈ ಪ್ರಶಸ್ತಿ ದೊರೆತಿದೆ.
ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ರಾಜ್ಯ ಮಟ್ಟದ ಪ್ರಶಸ್ತಿಗೆ ವಿವಿಧ ವಿಭಾಗದಲ್ಲಿ ಮಹಿಳಾ ಸಾಧಕರನ್ನ ಆಯ್ಕೆ ಮಾಡಿದ್ದು, ಆಯ್ಕೆಯಾದ ಎಲ್ಲ ಮಹಿಳಾ ಮಣಿಗಳು ಮತ್ತು ಅಧಿಕಾರಿಗಳಿಗೆ ಮಾರ್ಚ್ 8ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಸಂಜೀವಿನಿ-ಕೆಎಸ್‌ಆರ್‌ಎಲ್‌ಪಿಎಸ್ ಸಂಸ್ಥೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಜರುಗುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು ಜಿಲ್ಲಾ ಪಂಚಾಯತ್‌ನ ಡಿಆರ್‌ಡಿಎ ಶಾಖೆಯ ಯೋಜನಾ ನಿರ್ದೇಶಕ ಕರೀಂ ಅಸಾದಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಅತೀ ಹೆಚ್ಚು ಸಸ್ಯಕ್ಷೇತ್ರ ಮತ್ತು ಸಸಿಗಳ ಬೆಳೆಸಿರುವ ಅತ್ಯುತ್ತಮ ಜಿಲ್ಲೆಗೆ ನೀಡುವ 2022-23ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ಉತ್ತರ ಕನ್ನಡ ಜಿಲ್ಲಾ ಪಂಚಾಯತಿಯ ಸಂಜೀವಿನಿ-ಎನ್‌ಆರ್‌ಎಲ್‌ಎA ವಿಭಾಗಕ್ಕೆ ಲಭಿಸಿದೆ. ಪ್ರಧಾನಮಂತ್ರಿ ವನಧನ ವಿಕಾಸ ಕೇಂದ್ರಗಳ ಉತ್ತಮ ಕಾರ್ಯನಿರ್ವಹಣೆಗಾಗಿ ನೀಡುವ ರಾಜ್ಯ ಮಟ್ಟದ 2022-23ನೇ ಸಾಲಿನ ಉತ್ತಮ ಸಾಧನೆ ಪ್ರಶಸ್ತಿಯನ್ನು ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಪಡೆದುಕೊಂಡಿದೆ. ಸಂಜೀವಿನಿ-ಕೆಎಸ್‌ಆರ್‌ಎಲ್‌ಪಿಎಸ್ ಯೋಜನೆಯಡಿಯಲ್ಲಿ ಅತ್ಯುತ್ತಮವಾಗಿ ಕಾರ್ಯ ಸಾಧನೆ ಮಾಡಿರುವ ಗ್ರಾಮ ಪಂಚಾಯತಿ ಒಕ್ಕೂಟಕ್ಕೆ ನೀಡುವ 2022-23ನೇ ಸಾಲಿನ ರಾಜ್ಯ ಮಟ್ಟದ ಪುರಸ್ಕಾರಕ್ಕೆ ಜಿಲ್ಲೆಯ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತಿಯ ಭಾಗ್ಯಶ್ರೀ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ ಆಯ್ಕೆಯಾಗಿದೆ.
ಜಿಲ್ಲಾ ಪಂಚಾಯತಿಯಿಂದ ಗ್ರಾಮೀಣ ಪ್ರದೇಶದಲ್ಲಿ ಸಂಜೀವಿನಿ-ಕೆಎಸ್‌ಆರ್‌ಎಲ್‌ಪಿಎಸ್ ಯೋಜನೆ ಅನುಷ್ಠಾನಗೊಳಿಸಿದ ಉತ್ತಮ ಕಾರ್ಯ ಸಾಧನೆಗಾಗಿ ಜಿಲ್ಲೆಯ ಜೋಯಿಡಾ ತಾಲೂಕಿನ ಜೋಯಿಡಾ ಗ್ರಾಮ ಪಂಚಾಯತಿ ಒಕ್ಕೂಟದ ಮೋರೇಶ್ವರ ಸ್ವಸಹಾಯ ಗುಂಪು ಆಯ್ಕೆಯಾಗಿದೆ. ಗ್ರ‍್ರಾಮೀಣ ಭಾಗದಲ್ಲಿ ಅತೀ ಹೆಚ್ಚು ಹಣಕಾಸು ವಹಿವಾಟು ಮಾಡಿದ ಬ್ಯಾಂಕ್ ವಹಿವಾಟುದಾರ/ ಡಿಜಿ ಪೇ ಕಾರ್ಯನಿರ್ವಹಿಸಿದವರಿಗೆ ಉತ್ತೇಜಿಸುವ ನಿಟ್ಟಿನಲ್ಲಿ ನೀಡುವ 2022-23ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಜಿಲ್ಲೆಯ ಕುಮಟಾ ತಾಲೂಕಿನ ನಾಡುಮಾಸ್ಕೇರಿ ಗ್ರಾಮದ ಗಿರಿಜಾ ಅನಂತ ಗೌಡ ಅವರು ಭಾಜನರಾಗಿದ್ದಾರೆ. ಜಿಲ್ಲೆಯ ತಾಲೂಕು ಮಟ್ಟದಲ್ಲಿ ಸ್ವಸಹಾಯ ಗುಂಪುಗಳು ಹಾಗೂ ಗ್ರಾಪಂ ಒಕ್ಕೂಟಗಳನ್ನು ಒಗ್ಗೂಡಿಸಿಕೊಂಡು ಸಂಜೀವಿನಿ-ಕೆಎಸ್‌ಆರ್‌ಎಲ್‌ಪಿಎಸ್ ಯೋಜನೆಯಡಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಿಗೆ ನೀಡುವ 2022-23ನೇ ಸಾಲೀನ ರಾಜ್ಯಮಟ್ಟದ ಉತ್ತಮ ಸಾಧನೆ ಪ್ರಶಸ್ತಿಯು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ಪಂಚಾಯತ್‌ನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಮಂಜಣ್ಣ ಅವರಿ ಲಭಿಸಿದೆ.