• Slide
  Slide
  Slide
  previous arrow
  next arrow
 • ಗುಂಡಿನ ಮಳೆಗೆ ಎದೆಯೊಡ್ಡಿ ವಿಜಯದತ್ತ ಮುನ್ನುಗ್ಗಿದ ‘ಕರ್ನಲ್ ಹೋಶಿಯಾರ್ ಸಿಂಗ್’

  300x250 AD

  ವ್ಯಕ್ತಿ ವಿಶೇಷ: ಒಂದೆಡೆ ಶತ್ರು ಸೈನಿಕರ ಮೆಷಿನ್‌ಗನ್ನುಗಳು ಒಂದೇ ಸಮನೇ ಗುಂಡಿನ ಮಳೆಗರೆಯುತ್ತ ನಮ್ಮ ಸೈನಿಕರನ್ನು ಘಾಸಿಗೊಳಿಸುತ್ತಿದ್ದರೆ ಆ ವೀರ ತನ್ನ ದೇಹಕ್ಕಾದ ಗಾಯವನ್ನೂ ಲೆಕ್ಕಿಸದೇ ಹೋರಾಟ ಮುಂದುವರೆಸಿದ್ದಾನೆ. ಆ ಕಾದಾಟ ನಡೆಯುತ್ತಿದ್ದುದು ಕಾಶ್ಮೀರದ ಶಕರಗಢ ವಲಯದಲ್ಲಿನ ಬಸಂತರ್ ನದಿಯ ಬಳಿ. ಎರಡೂ ಕಡೆಗಳಲ್ಲಿ ಮೈನುಗಳನ್ನು ಹಾಕಿಕೊಂಡು ಪಾಕಿಸ್ತಾನಿ ಸೈನಿಕರು ಈ ಪ್ರದೇಶವನ್ನು ಬಂದೋಬಸ್ತ್ ಮಾಡಿದ್ದರು. ಹೀಗಾಗಿ ಈ ಕಣಿವೆ ಪ್ರದೇಶದಲ್ಲಿ ಮುನ್ನುಗ್ಗುವುದು ಬಹಳ ಕಠಿಣವಾದ ಕೆಲಸವಾಗಿತ್ತು. ಶತ್ರು ಸೈನಿಕರ ಗುಂಡಿನ ಮಳೆಯ ನಡುವೆ ನಮ್ಮ ಸೈನಿಕರು ಮುಂದುವರೆಯಬೇಕಿತ್ತು. ನಮ್ಮ ಸೈನಿಕರಿಗೆ ಪಾಕಿಸ್ತಾನಿ ಮಿಷನ್ ಗನ್ ಗಳು ತೊಂದರೆ ಉಂಟು ಮಾಡುತ್ತಿದ್ದವು. ಅವುಗಳನ್ನು ನಾಶಪಡಿಸಿ ನಮ್ಮ ಸೈನಿಕರು ವಿಜಯದಿಂದ ಮುನ್ನುಗ್ಗುವಂತೆ ಮಾಡಿದ್ದು ಈ ವೀರಯೋಧ. ಆತನ ಹೆಸರೇ ‘ಕರ್ನಲ್ ಹೋಶಿಯಾರ್ ಸಿಂಗ್’.

  ಹುಟ್ಟಿದ್ದು 1937ರಲ್ಲಿ ಇಂದಿನ ಹರಿಯಾಣ ರಾಜ್ಯದಲ್ಲಿರುವ ಸೋನಿಪತ್ ನಗರದ ಹತ್ತಿರದ ಹಳ್ಳಿಯಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದ ಹೋಶಿಯಾರ್ ಸಿಂಗ್ 1ನೇ ತರಗತಿಯನ್ನು ಮುಗಿಸುವ ಹೊತ್ತಿಗೇ ಸಂಸಾರಸ್ಥನಾಗಿದ್ದ. ಕಾಲೇಜು ವಿದ್ಯಾಭ್ಯಾಸಕ್ಕೆಂದು ರೋಕ್ಟಕ್ ನಲ್ಲಿರುವ ಜಾಟ್ ಕಾಲೇಜಿಗೆ ಸೇರಿಕೊಂಡು ಒಂದೇ ವರ್ಷದಲ್ಲಿ ಸೇನೆಗೆ ಸೇರಿದ್ದ. 1963ರಲ್ಲಿ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ಸೇರಿದ ಹೋಶಿಯಾರ್ ಸಿಂಗ್ ರನ್ನು 3ನೇ ಗ್ರೆನೇಡಿಯರ್ ರೆಜಿಮೆಂಟಿಗೆ ನೇಮಿಸಿಕೊಳ್ಳಲಾಗಿತ್ತು. ತರಬೇತಿಯ ನಂತರ ಅವರನ್ನು NEFA ( North East Frontier Region ) ಗಡಿಗೆ ಕಳುಹಿಸಲಾಗಿತ್ತು. 1965ರ ಭಾರತ-ಪಾಕ್ ಯುದ್ಧದಲ್ಲಿ ಯುವ ಅಧಿಕಾರಿಯಾಗಿದ್ದ ಹೋಶಿಯಾರ್ ಸಿಂಗ್ ಭಾಗವಹಿಸಿದ್ದರು. ಆದರೆ ಅವರ ನಿಜವಾದ ಪರಾಕ್ರಮ ಪ್ರದರ್ಶಿತವಾಗಿದ್ದು ಮಾತ್ರ 1971ರ ಯುದ್ಧದಲ್ಲಿ.

  ರಣರಂಗದಲ್ಲಿ ಶತ್ರುಪಡೆಗಳೊಂದಿಗೆ ಹೋರಾಟ:

  1971ರ ಯುದ್ಧ ಆರಂಭವಾಗಿತ್ತು. ಹೋಶಿಯಾರ್ ಸಿಂಗ್ ಅವರಿದ್ದ 3 ನೇ ಗ್ರೆನೇಡಿಯರ್ ಬೆಟಾಲಿಯನ್ ಅನ್ನು ಶಕರ್‌ಗಢ ಸೆಕ್ಟರಿನಲ್ಲಿ ನಿಯೋಜಿಸಲಾಗಿತ್ತು. ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಆಗಿ ನಿವೃತ್ತಿಯಾಗಿರುವ ಮಹಾವೀರ ಚಕ್ರ ಪುರಸ್ಕೃತರಾದ ವಿ.ಪಿ.ಏರಿ ಬೆಟಾಲಿಯನ್ ಅನ್ನು ಮುನ್ನಡೆಸುತ್ತಿದ್ದರು. ಡಿಸೆಂಬರ್ 15ರಂದು ಆಗಿನ್ನೂ ಮೇಜರ್ ಆಗಿದ್ದ ಹೋಶಿಯಾರ್ ಸಿಂಗ್ ಅವರಿದ್ದ ತಂಡಕ್ಕೆ ಶಕರ್‌ಗಢ ಸೆಕ್ಟರ್‌ನಲ್ಲಿ ಬಸಂತ‌ ನದಿಗೆ ಅಡ್ಡಲಾಗಿ ಸೇತುವೆಯನ್ನು ಸ್ಥಾಪಿಸುವ ಕಾರ್ಯವನ್ನು ನಿಯೋಜಿಸಲಾಯಿತು. ಇದು ಸುಲಭದ ಕೆಲಸವಾಗಿರಲಿಲ್ಲ ನದಿಯು ಎರಡೂ ಬದಿಗಳಲ್ಲಿ ಆಳವಾದ ಮೈನ್‌ಫೀಲ್ಡ್‌ಗಳನ್ನು ಹೊಂದಿತ್ತು. ಪಾಕಿಸ್ತಾನಿ ಸೈನ್ಯವು ಈ ಭಾಗವನ್ನು ಬಲವಾಗಿ ಕಾವಲು ಕಾಯುತ್ತಿತ್ತು.

  ಮುನ್ನುಗ್ಗಿದ ಹೋಶಿಯಾರ್ ಸಿಂಗ್ ಅವರ ತಂಡವು ಶತ್ರುಗಳ ಗುಂಡಿನ ದಾಳಿಯನ್ನು ಎದುರಿಸಬೇಕಾಯಿತು. ಮೆಷಿನ್ ಗನ್ ಗುಂಡುಗಳು ಹಾರುತ್ತಿದ್ದವು. ಜೊತೆಗೆ ಶೆಲ್ ದಾಳಿಯೂ ಜೋರಾಗಿತ್ತು. ಹಿಂಜರಿಯದ ಹೋಶಿಯಾರ್ ಸಿಂಗ್ ಶತ್ರುಗಳೊಂದಿಗೆ ನೇರ ಯುದ್ಧಕ್ಕಿಳಿದರು. ಎರಡೂ ಕಡೆಯಿಂದ ದಾಳಿ ಪ್ರಬಲವಾಗಿತ್ತು. ಹೋಶಿಯಾರ್ ಸಿಂಗ್‌ರಿಗೆ ಗಾಯವೂ ಆಗಿತ್ತು. ಆದರೂ ಹೋಶಿಯಾರ್ ಸಿಂಗ್ ಯುದ್ಧಕಣದಿಂದ ಹಿಂದೆ ಸರಿಯಲಿಲ್ಲ. ಮಾರನೇ ದಿನ ಅಂದರೆ ಡಿಸೆಂಬರ್ 16ರಂದು ಶತ್ರು ಸೈನ್ಯವು ಮೂರು ಬಾರಿ ಆಕ್ರಮಕವಾಗಿ ದಾಳಿ ನಡೆಸಿತು. ಹೋಶಿಯಾರ್ ಸಿಂಗ್ ಪಾದರಸದಂತೆ ಓಡಾಡುತ್ತ ಪ್ರತಿ ಟ್ರೆಂಚ್‌ಗೂ ಓಡಾಡುತ್ತ ನಮ್ಮ ಸೈನಿಕರನ್ನು ಹುರಿದುಂಬಿಸಿದರು. ಅವರ ಧೈರ್ಯ ಮತ್ತು ನಾಯಕತ್ವದಿಂದ ಸ್ಫೂರ್ತಿ ಪಡೆದ ನಮ್ಮ ಸೈನಿಕರು ವೀರಾವೇಶದಿಂದ ಹೋರಾಡಿದರು. ಪರಿಣಾಮ ಶತ್ರು ಸೈನ್ಯವು ಅಪಾರ ಸಾವು ನೋವುಗಳನ್ನು ಎದುರಿಸಬೇಕಾಯಿತು.

  300x250 AD

  ಡಿಸೆಂಬರ್ 17ರಂದು ಶತ್ರು ಸೈನಿಕರು ಭಾರೀ ಫಿರಂಗಿ ಗುಂಡಿನ ಬೆಂಬಲದೊಂದಿಗೆ ದೊಡ್ಡ ಬೆಟಾಲಿಯನ್ ಮೂಲಕ ಭಾರೀ ದಾಳಿ ನಡೆಸಿದರು. ಅವರೊಂದಿಗೆ ಹೋರಾಡುವ ವೇಳೆ ಹೋಶಿಯಾರ್ ಸಿಂಗ್ ಗಂಭೀರವಾಗಿ ಗಾಯಗೊಂಡರು. ಆದರೂ ಮತ್ತೆ ಎದ್ದುನಿಂತ ಹೋಶಿಯಾರ್ ಸಿಂಗ್ ನಮ್ಮ ಸೈನಿಕರಿಗೆ ಪ್ರೇರೇಪಣೆ ನೀಡ ತೊಡಗಿದರು. ಹೀಗೆ ಅವರು ಪ್ರತಿ ಟ್ರೆಂಚ್‌ಗೂ ಓಡಾಡುತ್ತಿರುವಾಗ ಶತ್ರುವಿನ ಶೆಲ್ ದಾಳಿಗೆ ಸಿಕ್ಕು ನಮ್ಮ ಮೆಷಿನ್ ಗನ್ ಪಿಟ್ ಗೆ ಹಾನಿಯಾಗಿತ್ತು. ತಕ್ಷಣವೇ ಅಲ್ಲಿಗೆ ಓಡಿದ ಹೋಶಿಯಾರ್ ಸಿಂಗ್ ಶತ್ರುಗಳ ಮೇಲಿನ ದಾಳಿ ಮುಂದುವರೆಸಿದರು. ಅವರಿಗಾದ ಗಂಭೀರಗಾಯ ಲೆಕ್ಕಕ್ಕಿರಲಿಲ್ಲ. ಭಾರತಾಂಬೆಯನ್ನು ಕಾಯುವುದೊಂದೇ ಪರಮೋದ್ದೇಶವಾಗಿತ್ತು. ಅವರ ದಾಳಿಗೆ ಸಿಕ್ಕು ಶತ್ರು ಸೈನ್ಯವು ಛಿದ್ರವಾಗಿಹೋಯಿತು. ಶತ್ರುಸೈನ್ಯದ ಕಮಾಂಡಿಂಗ್ ಆಫೀಸರ್ ಮತ್ತು ಇತರ ಮೂವರು ಅಧಿಕಾರಿಗಳು ಸೇರಿದಂತೆ 85 ಮಂದಿಯನ್ನು ನರಕಕ್ಕೆ ಅಟ್ಟಿದ್ದರು ಹೋಶಿಯಾರ್ ಸಿಂಗ್.

  ದಾಳಿಯು ಯಶಸ್ವಿಯಾಗಿತ್ತು. ಶತ್ರು ಸೈನಿಕರು ಸೋತು ಸುಣ್ಣವಾಗಿ ಹಿಮ್ಮೆಟ್ಟಿದ್ದರು. ಆದರೂ ಹೋಶಿಯಾರ್ ಸಿಂಗ್ ಹೋರಾಟವನ್ನು ಮುಂದುವರೆಸಿದರು. ಪರಿಣಾಮ ವಿಜಯ ನಮ್ಮದಾಯಿತು. ಅವರು ತೋರಿದ ಈ ಅಪ್ರತಿಮ ಸಾಹಸಕ್ಕೆ ಅವರಿಗೆ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿ’ ಪರಮ ವೀರ ಚಕ್ರ’ ವನ್ನು ನೀಡಿ ಗೌರವಿಸಲಾಯಿತು. ಅಪ್ರತಿಮ ಕರ್ತವ್ಯ ಪ್ರಜ್ಞೆ, ದೇಶ ಮೇಲಿದ್ದ ಅಚಲ ಭಕ್ತಿಯಿಂದಾಗಿ ಸೈನ್ಯದಲ್ಲಿ ಸೇವೆ ಮುಂದುವರೆಸಿದ ಅವರು ಕರ್ನಲ್ ಆಗಿ ಸೈನ್ಯದಿಂದ ನಿವೃತ್ತರಾದರು. 6 ನೇ ಡಿಸೆಂಬರ್ 1998 ರಂದು ಸ್ವರ್ಗಸ್ಥರಾದರು. ಇತ್ತೀಚೆಗಷ್ಟೇ ಅಂಡಮಾನಿನ ದ್ವೀಪವೊಂದಕ್ಕೆ ಅವರ ಹೆಸರನ್ನಿಟ್ಟು ಅವರನ್ನು ಅಮರರನ್ನಾಗಿಸಲಾಗಿದೆ. ಸಾರ್ಥಕ ಬದುಕನ್ನು ಬದುಕಿದ ಅವರು ನಮಗೆ ಎಂದೆಂದೂ ಪ್ರೇರಣೆಯನ್ನೀಯುವಂತಾಗಲಿ ಎಂಬುದು ಎಂದಿನ ಆಶಯ.

  ಮಾಹಿತಿ: ಗಣೇಶ್ ಗೋಪಿನಮರಿ

  Share This
  300x250 AD
  300x250 AD
  300x250 AD
  Leaderboard Ad
  Back to top