Slide
Slide
Slide
previous arrow
next arrow

ನಮ್ಮ ನೇತಾರರಿಗೆ ತಾಕತ್ತಿದ್ದರೆ ಗೋವಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಲಿ: ಮೋಹನ ಹೆಗಡೆ

300x250 AD

ಕುಮಟಾ : ಮೂರು ಲಕ್ಷ ಕೋಟಿ ಬಜೆಟಿನ ಮೂರರ ಒಂದು ಅಂಶ ಗೋವಿಗಾಗಿ ಸಿಕ್ಕಿದರೂ 3000 ಕೋಟಿ ಗೋವಿನ ಸಂರಕ್ಷಣೆಗೆ ವಿನಿಯೋಗವಾಗಲಿದೆ. ನಮ್ಮ ನೇತಾರರು ಈ ಕುರಿತಾಗಿ ಹೋರಾಟ ಮಾಡಬಲ್ಲವರಾದರೆ, ಆ ತಾಕತ್ತು ಅವರಿಗಿದ್ದರೆ ಗೋ ಬಜೆಟ್ ಮಂಡಿಸಲಿ ಎಂದು ಸೆಲ್ಕೋ ಸೋಲಾರ್ ನ ಸಿ.ಇ.ಓ ಮೋಹನ ಭಾಸ್ಕರ ಹೆಗಡೆ ಹೆರವಟ್ಟಾ ಹೇಳಿದರು.

ಅವರು ಹೊಸಾಡದ ಅಮೃತಧಾರಾ ಗೋಶಾಲೆಯಲ್ಲಿ ನಡೆದ “ಗೋ ಸಂಧ್ಯಾ” ಕಾರ್ಯಕ್ರಮದಲ್ಲಿ ಗೋ ಸೇವಕರನ್ನು ಗೌರವಿಸಿ ಮಾತನಾಡಿದರು. ದೇಶ ಹಾಗೂ ರಾಜ್ಯದ ಬಜೆಟ್ ನಲ್ಲಿ ಗೋ ಶಾಲೆಗೆ ಅಲ್ಪ ಮೊತ್ತ ನೀಡುವುದಲ್ಲ. ಗೋವಿನ ಉಳಿವಿಗಾಗಿಯೇ ಗೋವಿನ ಪ್ರತ್ಯೇಕ ಬಜೆಟ್ ಮಂಡಿಸುವ ವ್ಯವಸ್ಥೆ ಆಗಬೇಕು. ಗೋವಿಗಾಗಿ ದಾನ ಮಾಡಿದ ಹಣಕ್ಕೆ ಯಾವುದೇ ತೆರಿಗೆ ಇಲ್ಲದ ವ್ಯವಸ್ಥೆ ಈ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಜಾರಿಗೆ ಬರಬೇಕು. ಸಂಗ್ರಹವಾಗುವ ತೆರಿಗೆಯಲ್ಲಿ ಗೋವಿಗಾಗಿಯೇ ಪ್ರತ್ಯೇಕ ಸೆಸ್ ಇರಬೇಕು. ಈ ಬಗ್ಗೆ ನಮ್ಮನ್ನು ಆಳುವವರು ಗಮನಿಸಬೇಕು, ಅವರ ಇಚ್ಛಾಶಕ್ತಿ ಬೇಕು ಎಂದರು. ಕೃಷಿಗಾಗಿ, ಜನ ಸಾಮಾನ್ಯರಿಗಾಗಿ ಬಜೆಟ್ ಬಂದಿದೆ ಹಾಗೂ ಇನ್ನಿತರ ವ್ಯವಸ್ಥೆಗಾಗಿ ಪ್ರತ್ಯೇಕ ಬಜೆಟ್ಟಿದ್ದು, ಭಾರತದ ಪುಣ್ಯಭೂಮಿಯಲ್ಲಿ ಗೋವಿನ ರಕ್ಷಣೆಗಾಗಿ ಪ್ರತ್ಯೇಕ ಬಜೆಟ್ ಹಾಗೂ ತೆರಿಗೆ ಹಣ ವಿನಿಯೋಗವಾಗುವ ಕಾಲ ಬಂದರೆ ಮಾತ್ರವೇ ಅದು ನಿಜವಾದ ಭಾರತದ ಸ್ವಾತಂತ್ರ್ಯ ಎಂದು ಅಭಿಪ್ರಾಯಪಟ್ಟರು. ಗೋವು ಹಾಗೂ ಮಾನವನ ನಡುವಿನ ಸಂಬಂಧದ ಕುರಿತಾಗಿ ಮಹಾಭಾರತದ ಕಥಾನಕಗಳನ್ನು ಉಲ್ಲೇಖಿಸಿದ ಅವರು ಗೋವು ಉಳಿದರೆ ಮಾತ್ರ ನಾವು ಉಳಿಯುತ್ತೇವೆ. ಈ ದೇಶದ ಸಂಸ್ಕೃತಿ ಉಳಿಯುತ್ತದೆ. ಎಂದು ಅಭಿಪ್ರಾಯಪಟ್ಟರು.

ಗೋ ಸಂತರ್ಪಣೆ ಹಾಗೂ ಗೋ ಸಂಧ್ಯಾ ಕಾರ್ಯಕ್ರಮ ಐದು ಸಾವಿರಕ್ಕೂ ಅಧಿಕ ಜನರ ಕೂಡುವಿಕೆಯಲ್ಲಿ ಅತ್ಯಂತ ಯಶಸ್ವಿಯಾಗಿ ಸಂಪನ್ನವಾಯಿತು. ಎರಡು ಕಬ್ಬಿನ ಗಾಣಗಳ ನಡುವಿನ ಭವ್ಯವೇದಿಕೆಯಲ್ಲಿ ಗೋವನ್ನು ಸಾಕಲು ಗೋಶಾಲೆಗೆ ಕೊಡುಗೆ ನೀಡಿದ ದಾನಿಗಳನ್ನು ಗೌರವಿಸುವ ಹಾಗೂ ಗೋವಿನ ಸೇವೆ ಮಾಡುತ್ತಿರುವ ಗೋ ಸೇವಕರಿಗೆ “ಗೋಪಾಲ ಗೌರವ” ನೀಡುವ ಕಾರ್ಯಕ್ರಮ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ್ನಣೆ ಗಳಿಸಿದವು.

ಕುಮಟಾದ ಪಿಎಸ್ಐ ಮಂಜುನಾಥ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಷ್ಟು ಸುದೀರ್ಘಕಾಲ ಗೋಶಾಲೆಯನ್ನು ನಡೆಸುವುದು ಎಷ್ಟು ಕಠಿಣ ಎಂಬ ಅರಿವು ನಮಗಿದೆ. ಗೋ ಸಂರಕ್ಷಣೆಯಲ್ಲಿ ಪೊಲೀಸರಾದ ನಾವುಗಳು ನಿರ್ವಹಿಸಬೇಕಾದ ಕರ್ತವ್ಯವೂ ಹೆಚ್ಚಿದ್ದು ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳನ್ನು ತಡೆದು ಅವುಗಳನ್ನು ಯಾವ ರೀತಿ ವ್ಯವಸ್ಥೆ ಮಾಡಬೇಕು ಎಂದು ಚಿಂತೆ ನಮಗಾದಾಗಲೆಲ್ಲ, ಅಮೃತಧಾರಾ ಗೋ ಶಾಲೆ ನಮ್ಮ ಜೊತೆಗೆ ಸಹಕಾರ ನೀಡಿದೆ. ಹೀಗಾಗಿ ಗೋಶಾಲಾ ಸಮಿತಿಗೆ ಧನ್ಯವಾದಗಳು ಎಂದರು.

300x250 AD

ಗೋಶಾಲೆಯ ಅಧ್ಯಕ್ಷರಾದ ಮರಳಿಧರ ಪ್ರಭು ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಕೋಶಾಧ್ಯಕ್ಷರಾದ ಸುಬ್ರಾಯ ಭಟ್ಟ ವರದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಉಗ್ರು ವಂದಿಸಿದರು. ಗೋ ಸಂಧ್ಯಾ ಕಾರ್ಯಕ್ರಮದ ಯಶಸ್ಸಿಗಾಗಿ ಜನರನ್ನು ಭೇಟಿಮಾಡಿ ಶ್ರಮಿಸಿದ ಉಪಾದ್ಯಕ್ಷರಾದ ಆರ್.ಜಿ ಭಟ್ಟರವರಿಗೆ ಸ್ಮರಣಿಕೆ ನೀಡಲಾಯಿತು. ಕಾರ್ಯದರ್ಶಿ ಅರುಣ ಹೆಗಡೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಹೊಸಾಡದ ಅಂಗನವಾಡಿ, ಪ್ರಗತಿ ವಿದ್ಯಾಲಯ ಮೂರೂರು ಹಾಗೂ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಗವ್ಯೋತ್ಪನ್ನಗಳು, ತೊಡಾದೇವು, ಬೆಲ್ಲದ ಬಾಳೆದಿಂಡು, ಬೆಲ್ಲದ ಪಪ್ಪಾಯಿ, ಕಬ್ಬಿನ ಹಾಲಿನ ದೋಸೆ, ಬಿಸಿ ಬೆಲ್ಲ, ಕಬ್ಬಿನಹಾಲು ಬರಪೂರ ಮಾರಾಟವಾದವು. ಗೋಶಾಲೆಯ ಗೋವುಗಳಿಗೆಲ್ಲ ವಿಶೇಷ ಗೋಸಂತರ್ಪಣೆ ಏರ್ಪಡಿಸಲಾಗಿತ್ತು. ಗೋವುಗಳಿಗೆ ನೀಡಿದ ಹಣವನ್ನು ಅದರ ಸೇವೆಗೆ ವಿನಯೋಗಿಸಿ, ಸಂಪೂರ್ಣ ಪ್ರಾಯೋಜಕರ ಮೂಲಕವೇ ಐದು ಸಾವಿರಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.

Share This
300x250 AD
300x250 AD
300x250 AD
Back to top