ಶಿರಸಿ: ಈ ಬಾರಿ ಮರಾಠ ಸಮುದಾಯದ ಮುಖಂಡ ಕೆಪಿಸಿಸಿ ಸದಸ್ಯ ಜಿ.ಎಚ್.ಮರಿಯೋಜಿರಾವ್ ಅವರಿಗೆ ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೇಟ್ ನೀಡಬೇಕೆಂದು ಜಿಲ್ಲಾ ಕ್ಷತ್ರಿಯ ಮರಾಠಾ ಸಮುದಾಯದ ಮುಖಂಡ ಪಾಂಡುರಂಗ ವಿ.ಪಾಟೀಲ್, ಛತ್ರಪತಿ ಶಿವಾಜಿ ಸೈನ್ಯ ಜಿಲ್ಲಾಧ್ಯಕ್ಷ ಮಂಜುನಾಥ ಕೀರ್ತಪ್ಪನವರ, ಶಿರಸಿ ತಾಲೂಕಾ ಅಧ್ಯಕ್ಷ ಪ್ರಶಾಂತ ಭಂಡೇರ, ಬನವಾಸಿಯ ಶಿವಾಜಿ ಆರೇರ ಆಗ್ರಹಿಸಿದ್ದಾರೆ.
ಜಿಲ್ಲೆಯ 6 ವಿಧಾಸಭಾ ಕ್ಷೇತ್ರಗಳಲ್ಲಿ 4 ವಿದಾನಸಭಾ ಕ್ಷೇತ್ರಗಳಾದ ಯಲ್ಲಾಪುರ, ಹಳಿಯಾಳ, ಕಾರವಾರ, ಶಿರಸಿ ಕ್ಷೇತ್ರಗಳಲ್ಲಿ, ಅಲ್ಲದೇ ಕೆನರಾ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕ್ಷತ್ರಿಯ ಮರಾಠಾ ಹಾಗೂ ನಮ್ಮ ಸಮುದಾದ ಮತದಾರರು ಇದ್ದೇವೆ. ಈ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಪಕ್ಷದವರನ್ನು ಗೆಲ್ಲಿಸುವ ಮತ್ತು ಸೋಲಿಸುವ ಶಕ್ತಿ ನಮ್ಮ ಸಮುದಾಯದವರ ಕೈಯಲ್ಲಿ ಇದೆ ಈ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಕ್ಷತ್ರಿಯ ಮರಾಠಾ ಮತ್ತು ನಮ್ಮ ಸಮುದಾಯದ ಉಪ ಪಂಗಡದವರೇ ನಿರ್ಣಾಯಕರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮೊದಲಿನಿಂದಲೂ ನಮ್ಮ ಕ್ಷತ್ರಿಯ ಮರಾಠ ಸಮುದಾಯದವರು ಮತ್ತು ನಮ್ಮ ಉಪಪಂಗಡದವರು ಶೇ 50ರಷ್ಟು ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡುತ್ತಾ ಬಂದಿರುತ್ತೇವೆ. ಆದರೂ ಸಹ ನಮ್ಮ ಸಮುದಾಯದವರಿಗೆ ವಿದಾನಸಭಾ ಚುನಾವಣೆಯಲ್ಲಿ ಟಿಕೇಟ್ ನೀಡುವುದಿಲ್ಲ ಎಂದು ಬೇಸರಿಸಿದ್ದಾರೆ.
ಯಲ್ಲಾಪುರ ಕ್ಷೇತ್ರದಲ್ಲಿ ಇವರ ಪಕ್ಷದ ಸೇವೆಯನ್ನು ಪರಿಗಣಿಸಿ ಹಾಗೂ ಕ್ಷತ್ರಿಯ ಮರಾಠಾ ಜನಾಂಗದ ಕೋಟಾದಲ್ಲಿ ಇವರಿಗೆ ಟಿಕೇಟ್ ನೀಡುವಂತೆ ರಾಜ್ಯ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ ಸಿಂಗ್, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ನೇತ್ರತ್ವದಲ್ಲಿ ಜಿಲ್ಲೆಯ ಮತ್ತು ವಿವಿಧ ತಾಲೂಕಿನ ಕ್ಷತ್ರಿಯ ಮರಾಠಾ ಸಮುದಾಯದವರ ನಿಯೋಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸ್ಕ್ರೀನಿಂಗ್ ಸಮಿತಿ ಅಧ್ಯಕ್ಷ ಮೋಹನ ಪ್ರಕಾಶ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಅಧ್ಯಕ್ಷ ಜಿ.ಪರಮೇಶ್ವರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ನಾಯಕ ಬಿ.ಕೆ.ಹರಿಪ್ರಸಾದ, ಜಿಲ್ಲೆಯ ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆ ಮುಂತಾದ ರಾಜ್ಯ- ರಾಷ್ಟ್ರೀಯ ಕಾಂಗ್ರೆಸ್ ನಾಯಕರಿಗೆ ಭೇಟಿ ಮಾಡಿ ಟಿಕೇಟ್ ನೀಡುವಂತೆ ಆಗ್ರಹಿಸಲಾಗುವುದು ಹಾಗೂ ಬೇರೆ ಪಕ್ಷದಿಂದ ಬಂದವರಿಗೆ ಮಣೆ ಹಾಕದೇ ಪಕ್ಷದ ಸಂಘಟನೆ, ಸೇವೆಯನ್ನು ಗುರುತಿಸಿ ಇವರಿಗೆ ಅವಕಾಶ ನೀಡುವಂತೆ ಆಗ್ರಹಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮರಿಯೋಜಿರಾವ ಅವರು ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್ ಘಟಕದಲ್ಲಿ ಮತ್ತು ರಾಜ್ಯ ಯುವ ಕಾಂಗ್ರೆಸ್ ಘಟಕದಲ್ಲಿ ಕಳೆದ 40 ವರ್ಷಗಳಿಂದ ನಿರಂತರವಾಗಿ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಇವರಿಗೆ ಟಿಕೇಟ್ ನೀಡಬೇಕು. ಹೊರತು ಬೇರೆ ಪಕ್ಷದಲ್ಲಿ ಅಧಿಕಾರವನ್ನು ಅನುಭವಿಸಿ ಈಗ ಕಾಂಗ್ರೆಸ್ ಪಕ್ಷದ ಅಧಿಕಾರವನ್ನು ಪಡೆಯಲು ಬಂದವರಿಗೆ ಟಿಕೇಟ್ ನೀಡಬಾರದು. ಪಕ್ಷ ಕಟ್ಟಿದವರಿಗೆ ಅವಕಾಶವನ್ನು ನೀಡಬೇಕೇ ಹೊರತು ಅಧಿಕಾರ ಅನುಭವಿಸಿ ಬೇರೆ ಪಕ್ಷಕ್ಕೆ ಹೋಗುವವರಿಗೆ ಟಿಕೆಟ್ ನೀಡಬಾರದು. ಕಾಂಗ್ರೆಸ್ ಪಕ್ಷ ಇವರಿಗೆ ಟಿಕೆಟ್ ನೀಡಲು ನಿರ್ಲಕ್ಷಿಸಿದರೆ ಕ್ಷತ್ರಿಯ ಮರಾಠ ಸಮುದಾಯದವರ ಹಾಗೂ ಉಪ ಪಂಗಡದವರ ಶಕ್ತಿಯನ್ನು ಜಿಲ್ಲೆಯ ಎಲ್ಲಾ ವಿದಾನಸಭಾ ಕ್ಷೇತ್ರಗಳಲ್ಲಿ ಮತ್ತು ಕೆನರಾ ಲೋಕಸಭೆ ಚುನಾವಣೆಯಲ್ಲಿ ತೋರಿಸಬೇಕಾಗುತ್ತದೆ ಎಂದು ಮಂಜುನಾಥ ಕೀರ್ತಪ್ಪನವರ ತಿಳಿಸಿದ್ದಾರೆ.