ಹೊನ್ನಾವರ: ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಯಕ್ಷೈಕ್ಯ ಚಂದ್ರಹಾಸ ಹುಡಗೋಡರವರ 4ನೇ ವರ್ಷದ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಯಕ್ಷಗಾನ ಭಾಗವತ ಸುರೇಂದ್ರ ಪಣಿಯೂರ್ ಮಾತನಾಡಿ ಕಲಾಸೇವೆಯ ಜೊತೆಗೆ ಕಲಾವಿದರನ್ನು ಗೌರವಿಸುವ ಕಾರ್ಯವಾಗಬೇಕಿದೆ. ಹುಡಗೋಡರವರು ತಮ್ಮ ಉತ್ತಮ ಅಭಿನಯ ಚಾತುರ್ಯದ ಮೂಲಕ ಜನಮನದಲ್ಲಿ ನೆಲೆಯಾಗಿ ಗೆಲವು ಕಂಡಿದ್ದಾರೆ.ಯಕ್ಷಗಾನ ಹೊರತಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಜನರ ಪ್ರೀತಿ,ವಿಶ್ವಾಸ ಗಳಿಸಿದ್ದರು.ಅತಿಥಿ ಕಲಾವಿದರಾಗಿಯು ಬಹು ಬೇಡಿಕೆಯುಳ್ಳ ಕಲಾವಿದರಾಗಿದ್ದರು ಎಂದು ಸ್ಮರಿಸಿದರು.
ಹಿರಿಯ ಸಾಹಿತಿ ಶ್ರೀಪಾದ ಶೆಟ್ಟಿ ಮಾತನಾಡಿ, ಯಕ್ಷಗಾನ ರಂಗಸ್ಥಳದಲ್ಲಿ ತನ್ನ ನಟನೆ ಹಾವಭಾವದಲ್ಲಿ ಚ್ಯುತಿಬಾರದಂತೆ ಅದ್ಭುತವಾಗಿ ಕುಣಿತ ಮಾಡುತ್ತಿದ್ದರು. ಒಬ್ಬ ಕಲಾವಿದನಾಗಿ ಇನ್ನೊಬ್ಬ ಕಲಾವಿದನಿಗೆ ಸ್ಪಂದಿಸುವ ಗುಣ ಹೊಂದಿದವರಾಗಿದ್ದರು. ಚಂದ್ರಹಾಸರು ರಂಗಸ್ಥಳದ ಮಿಂಚು. ಅವರು ಏನನ್ನಾದರೂ ಸಾಧಿಸಬೇಕು ಎಂಬ ಛಲ ಅವರ ಮಹತ್ವಾಕಾಂಕ್ಷೆ ಅವರನ್ನು ಇನ್ನೊಂದು ದಾರಿಯಲ್ಲಿ ಕೊಂಡೊಯ್ದಿತ್ತು ಎಂದರು.
ಯಕ್ಷಗಾನ ಕಲಾವಿದ ವಿದ್ಯಾಧರ ಜಲವಳ್ಳಿ ಮಾತನಾಡಿ, ಹುಡುಗೋಡವರು ಯಕ್ಷಗಾನ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಬದುಕಿದ್ದರೆ ಅವರು ಒರ್ವ ಶ್ರೇಷ್ಠ ಕಲಾವಿದನಾಗಿ ಮಿಂಚುತ್ತಿದ್ದರು. ಚಲಾವಣೆಯಲ್ಲಿದ್ದಾಗ ಮಾತ್ರ ಕಲಾವಿದನಿಗೆ ಬೆಲೆ.ಆದರೆ ಕಲೆಗೆ ಎಂದು ಸಾವಿಲ್ಲ. ಯಕ್ಷಗಾನ ರಂಗಕ್ಕೆ ಹುಡುಗೋಡ ರವರು ಕೊಟ್ಟ ಕೊಡುಗೆ ಸೂರ್ಯ ಚಂದ್ರ ಇರುವ ತನಕ ಅಜರಾಮರ ಎಂದು ಗುಣಗಾನ ಮಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲಾವಿದರನ್ನು ಬದುಕಿದ್ದಾಗ ಮತ್ತು ಸತ್ತಾಗ ಗೌರವಿಸುತ್ತಾರೆ. ಆದರೆ ನಮ್ಮ ಜಿಲ್ಲೆಯಲ್ಲಿ ಕಲಾವಿದರನ್ನು ಬದುಕಿದ್ದಾಗಲೂ ಗೌರವಿಸುವುದಿಲ್ಲ. ನಮ್ಮಲ್ಲಿ ಒಂದು ಕಾರ್ಯಕ್ರಮ ನಡೆಸಿದಾಗ ಸಹಕಾರ ನೀಡುವುದಿರಲಿ, ಸುಮ್ಮನೆ ಪಾಲ್ಗೊಳ್ಳುವುದಕ್ಕೂ ಜನರು ಬರುವುದಿಲ್ಲ. ಯಕ್ಷಗಾನವನ್ನು ನಾನು ದೂರುತ್ತಿಲ್ಲ. ನಮ್ಮ ಜಿಲ್ಲೆಯಲ್ಲಿರುವ ವ್ಯವಸ್ಥೆಯನ್ನು ದೂರುತ್ತಿದ್ದೇನೆ. ಯಕ್ಷಗಾನ ನಮಗೆ ಅನ್ನ ನೀಡಿದೆ ಎಂದರು.
ಹಿರಿಯ ಯಕ್ಷಗಾನ ಕಲಾವಿದ ಮಂಜು ಗೌಡ ಗುಣವಂತೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಧಾರೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ವಿ.ಜಿ ನಾಯ್ಕ,ಪ್ರಾಧ್ಯಾಪಕ ಪ್ರಸಾದ್ ಪೂಜಾರಿ,ಸತೀಶ್ ನಾಯ್ಕ ಉಪಸ್ಥಿತರಿದ್ದರು. ನಂತರ ಕುಶ- ಲವ ಯಕ್ಷಗಾನ ನಡೆಯಿತು.