ಶಿರಸಿ: ಕೆಎಚ್‌ಬಿ ಕಾಲೋನಿಯ 8ನೇ ವಾರ್ಡಿನಲ್ಲಿ ಹಾಳಾಗಿರುವ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಿಕೊಡಬೇಕೆಂದು ಆಗ್ರಹಿಸಿ ಆ ಭಾಗದ ಸಾರ್ವಜನಿಕರು ಉಪವಿಭಾಗಾಧಿಕಾರಿಗೆ ಶುಕ್ರವಾರ ಮನವಿ ನೀಡಿದರು.
ಕೆಎಚ್‌ಬಿ ಕಾಲೋನಿಯ ಕನ್ನಡ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಸರ್ವೆ ನಂ 150 ರಲ್ಲಿ ಸುಮಾರು 23 ಮನೆಗಳಿದ್ದು, ಮನೆಯ ಎದುರುಗಡೆ ಇರುವ ರಸ್ತೆ ಮತ್ತು ಚರಂಡಿ ಸಂಪೂರ್ಣವಾಗಿ ಹಾಳಾಗಿ 25 ವರ್ಷಗಳು ಕಳೆದಿದೆ. ರಸ್ತೆಯ ಅಕ್ಕಪಕ್ಕ ಚರಂಡಿ ಇಲ್ಲದ ಕಾರಣಕ್ಕೆ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಮಳೆಯ ನೀರಿನ ಜೊತೆಗೆ ಮಲಮೂತ್ರದ ನೀರು ಕೂಡಾ ಬರತೊಡಗುತ್ತದೆ. ಮಳೆ ಹೆಚ್ಚಾದಂತೆ ನೀರು ಮುಂದೆ ಹರಿಯಲಾಗದೇ ನಿಂತಲ್ಲೆ ನಿಂತು ಮನೆಯ ಬಾವಿಗೆ ಸೇರುತ್ತಿರುವುದರಿಂದ ಬಾವಿ ನೀರು ಹಾಳಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.
ಇನ್ನು ಕೆಲವೆ ದಿನಗಳಲ್ಲಿ ವಿಧಾನಸಭೆಯ ಚುನಾವಣೆ ನಡೆಯಲಿದ್ದು, ನೀತಿ ಸಂಹಿತೆ ಜಾರಿ ಆಗುವುದರೊಳಗೆ ಈಗಾಗಲೇ ಮಂಜೂರಿಯಾಗಿರುವ ಅನುದಾನದಲ್ಲಿ ರಸ್ತೆ ಮತ್ತು ರಸ್ತೆ ಅಕ್ಕಪಕ್ಕದಲ್ಲಿ ಚರಂಡಿ ನಿರ್ಮಿಸಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ನೀಡುವ ಸಂದರ್ಭದಲ್ಲಿ ನಿವೃತ್ತ ಸೈನಿಕರಾದ ಶ್ರೀನಿವಾಸ್, ಎಸ್.ಎನ್.ನಾಯ್ಕ, ಅರವಿಂದ ನಾಯ್ಕ, ಎಚ್.ಎನ್.ಚಂದಾವರ್, ನಿತೇಶ್ ಶೇಟ್, ಪ್ರಕಾಶ ನಾಯ್ಕ, ಅಮರ ಶೆಟ್ಟಿ, ಜಿ.ಎಮ್.ಹೆಗಡೆ ಮುಂತಾದವರು ಹಾಜರಿದ್ದರು.