ದಾಂಡೇಲಿ: ಮಾ.04ರಂದು ನಡೆಯಲಿರುವ ತಾಲೂಕಿನ ಮೊಟ್ಟ ಮೊದಲ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ನಗರಸಭೆಯ ಸಭಾಭವನದಲ್ಲಿ ಶುಕ್ರವಾರ ಬಿಡುಗಡೆಗೊಳಿಸಲಾಯಿತು.
ತಹಶೀಲ್ದಾರ್ ಅಶೋಕ್ ಶಿಗ್ಗಾವಿಯವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ತಾಲೂಕಿನಲ್ಲಿ ನಡೆಯಲಿರುವ ಮೊದಲ ಕನ್ನಡ ಸಾಹಿತ್ಯ ಜಾತ್ರೆಯನ್ನು ಐತಿಹಾಸಿಕವನ್ನಾಗಿಸಲು ಸರ್ವರೂ ಒಂದಾಗಿ ಶ್ರಮಿಸೋಣ ಎಂದು ಕರೆನೀಡಿದರು.
ನಗರಸಭೆಯ ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್ ಮಾತನಾಡಿ, ಸಾಹಿತ್ಯ ಸಮ್ಮೇಳನ ನಮ್ಮೆಲ್ಲರ ಅತ್ಯಂತ ಹೆಮ್ಮೆಯ ಹಬ್ಬ. ಸಾಹಿತ್ಯ ಜಾತ್ರೆಯನ್ನು ವಿಶಿಷ್ಟ ರೀತಿಯಲ್ಲಿ ನಡೆಸಲು ನಾವೆಲ್ಲರೂ ಕಟಿಬದ್ಧರಾಗಿದ್ದೇವೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ದಾಂಡೇಲಿ ತಾಲೂಕಾದ ಬಳಿಕ ಮೊದಲ ತಾಲೂಕು ಸಮ್ಮೇಳನ ಇದಾಗಿದ್ದು, ಮನೆ ಮನಗಳಲ್ಲಿ ಕನ್ನಡ ಮೊಳಗುವ ನಿಟ್ಟಿನಲ್ಲಿ ಅಕ್ಷರ ಜಾತ್ರೆಯ ಯಶಸ್ಸಿಗೆ ಸರ್ವರು ಕೈಜೋಡಿಸಬೇಕೆಂದರು.
ಕಸಾಪ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಗೌರವ ಕೋಶಾಧ್ಯಕ್ಷ ಶ್ರೀಮಂತ ಮದರಿ ವಂದಿಸಿದರು. ಗೌರವ ಕಾರ್ಯದರ್ಶಿ ಪ್ರವೀಣ್ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ಸಿಪಿಐ ಬಿ.ಎಸ್.ಲೋಕಾಪುರ, ತಾಲ್ಲೂಕು ಪಂಚಾಯ್ತು ಕರ‍್ಯನಿರ್ವಾಹಣಾಧಿಕಾರಿ ಪ್ರಕಾಶ ಹಾಲಮ್ಮನವರ, ಹೆಸ್ಕಾಂ ಸಹಾಯಕ ಕರ‍್ಯನಿರ್ವಾಹಕ ಅಭಿಯಂತರರಾದ ದೀಪಕ ನಾಯಕ, ನಗರ ಸಭಾ ಸದಸ್ಯರುಗಳಾದ ಯಾಸ್ಮಿನ್ ಕಿತ್ತೂರು, ಮಜೀದ್ ಸನದಿ, ಮೋಹನ ಹಲವಾಯಿ, ಮಹಾದೇವ ಜಮಾದಾರ, ಸಪೂರ ಯರಗಟ್ಟಿ, ರುಕ್ಮಿಣಿ ಬಾಗಾಡೆ, ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷರಾದ ಮುರ್ತುಜಾ ಆನೆ ಹೊಸೂರು, ತಾಲೂಕು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಸುರೇಶ್ ನಾಯಕ ಮುಂತಾದವರಿದ್ದರು.