ಕುಮಟಾ: ತಾಲೂಕಿನ ಹಂದಿಗೋಣದ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಬೆತ್ತಗೇರಿ ಎಸ್.ವಿನಾಯಕ ಭಟ್ಟರು ಕನ್ನಡದಲ್ಲಿ ಅನುವಾದಿಸಿದ ನಚಿಕೇತೋದ್ಧರಣಂ ಮತ್ತು ಸೌಂದರ್ಯ ಲಹರಿ ಗ್ರಂಥವನ್ನು ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಲೋಪಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಅವರು, ಋಗ್ವೇದಿಗಳಿಗೆ ಯಜ್ಞ- ಯಾಗಾದಿಗಳು ಮುಖ್ಯ. ಆತ್ಮಜ್ಞಾನವನ್ನು ಪಡೆಯುವ ವಿಧಾನವನ್ನು ನಚಿಕೇತೋದ್ಧರಣಂ ತಿಳಿಸುತ್ತದೆ. ಸೌಂದರ್ಯ ಲಹರಿಯಲ್ಲಿ ಜಗನ್ಮಾತೆಯ ದಿವ್ಯ ದರ್ಶನದ ಬಗ್ಗೆ ಭಗವತ್ಪಾದರು ವಿಶೇಷವಾಗಿ ವರ್ಣನೆ ಮಾಡಿದ್ದಾರೆ. ಪ್ರತಿನಿತ್ಯ ಕುಂತಲ್ಲಿ, ನಿಂತಲ್ಲಿ ಹೇಳಬಹುದಾದ ಸೌಂದರ್ಯ ಲಹರಿ ಮಂತ್ರವಾಗಿದ್ದು, ಪ್ರತಿಯೊಬ್ಬರೂ ಈ ಸ್ತೋತ್ರ ಪಠಣೆಯಿಂದ ಪರಿಶುದ್ಧ ಮನಸ್ಸು ಪಡೆಯಬಹುದು ಎಂದ ಅವರು, ಭಾಮಿನಿ ಷಟ್ಪದಿಯ ಕಠೋಪನಿಷತ್ ಆಧಾರಿತ ನಚಿಕೇತೋದ್ಧರಣಂದಲ್ಲಿ ಭಾರತೀಯ ತತ್ವಶಾಸ್ತçಗಳು ಅಡಕವಾಗಿದ್ದು, ತತ್ವವನ್ನು ಅನೇಕ ವಿಧಾನವನ್ನು ಹೇಳುವ ಪರಂಪರೆಯು ನಮ್ಮದು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಪ್ರವೀಣ ಹೆಗಡೆ ಮಾತನಾಡಿ, ಕನ್ನಡದಲ್ಲಿ ಅನುವಾದ ಪುಸ್ತಕಗಳ ಸಂಖ್ಯೆ ಕಡಿಮೆ ಸಂಖ್ಯೆಯಲ್ಲಿದ್ದು, ಸಾಹಿತ್ಯ, ಕಾವ್ಯಗಳಿಂದ ನಮ್ಮಲ್ಲಿರುವ ಭಾಷೆಯನ್ನು ಹತ್ತಿರವಾಗಿಸುತ್ತದೆ ಎಂದ ಅವರು, ಲೇಖಕ ಬೆತ್ತಗೇರಿ ಎಸ್.ವಿನಾಯಕ ಭಟ್ಟ ಅವರು ಇಳಿವಯಸ್ಸಿನಲ್ಲಿ ಸಾಹಿತ್ಯದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಂದ ಇನ್ನಷ್ಟು ಕೃತಿಗಳು ಹೊರ ಬರುವಂತಾಗಲಿ ಎಂದು ಶುಭಹಾರೈಸಿದರು.
ಹಂದಿಗೋಣದ ಶ್ರೀಮಹಾಗಣಪತಿ ದೇವಸ್ಥಾನದ ಮೊಕ್ತೇಸರ ಗಣಪತಿ ಭಾಗ್ವತ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಬೆತ್ತಗೇರಿ ಎಸ್.ವಿನಾಯಕ ಭಟ್ಟ ಅವರು ಕನ್ನಡ ಅನುವಾದಿತ ನಚಿಕೇತೋದ್ಧರಣಂ ಮತ್ತು ಸೌಂದರ್ಯಲಹರಿ ಗ್ರಂಥಗಳನ್ನು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಓದಿ, ಲೇಖಕರಿಗೆ ಪ್ರೋತ್ಸಾಹ ನೀಡಬೇಕು ಎಂದರು. ಲೇಖಕ ಬೆತ್ತಗೇರಿ ಎಸ್.ವಿನಾಯಕ ಭಟ್ಟ ನಿರೂಪಿಸಿದರು. ಲಲಿತಾ ಹೆಗಡೆ ಮತ್ತು ಸರಿತಾ ಹೆಗಡೆ ಅವರ ಗಣಪತಿ ಸ್ತುತಿಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗಾಯಕ ಶ್ರೀಪಾದ ಭಟ್ಟ ಕಡತೋಕಾ ಹಾಗೂ ಸಂಗೀತ ಶಿಕ್ಷಕ ವಿಶ್ವೇಶ್ವರ ಭಟ್ಟ ಖರ್ವಾ ಅವರ ಕಂಠದಿಂದ ಮೂಡಿಬಂದ ನಚಿಕೇತೋದ್ಧರಣಂ ಮತ್ತು ಸೌಂದರ್ಯಲಹರಿ ಕಾವ್ಯ ಗಾಯನ ಮೆಚ್ಚುಗೆಗೆ ಪಾತ್ರವಾಯಿತು.