ಶಿರಸಿ: ತಾಲೂಕಿನ ಬದನಗೋಡ, ರಂಗಾಪುರ ಹಾಗೂ ದಾಸನಕೊಪ್ಪ ಭಕ್ತರು ಆಚರಿಸುವ ಕಾನೇಶ್ವರಿ ದೇವಿ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಬದನಗೋಡ ಕಾನಮ್ಮ ಎಂದೇ ಪ್ರಖ್ಯಾತಿ ಪಡೆದ ಶಕ್ತಿ ದೇವತೆ ಕಾನೇಶ್ವರಿ ದೇವಿಯ ಜಾತ್ರೆಯು ಯಾವುದೇ ಅಡೆ- ತಡೆ, ತೊಂದರೆಗಳಿಲ್ಲದೇ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಫೆ.20ರಂದು ದೇವಿಯ ಮಹಾರುದ್ರಾಭಿಷೇಕ ನೆರವೇರಿತು. ಮಂಗಳವಾರ ದೇವಿಯ ಮೂರ್ತಿಯನ್ನು ಜೋಡೆತ್ತಿನ ಬಂಡಿಯಲ್ಲಿರಿಸಿ ರಂಗಾಪುರದಿಂದ ಮೆರವಣಿಗೆ ಹೊರಟು ಗ್ರಾಮದ ಎಲ್ಲಾ ಬೀದಿಗಳಲ್ಲಿ ಸಂಚರಿಸಿ ನಂತರ ದಾಸನಕೊಪ್ಪಕ್ಕೆ ತಲುಪಿ ಊರಿನ ಎಲ್ಲಾ ಬೀದಿಗಲ್ಲೂ ಮೆರವಣಿಗೆ ನಡೆಸಿ ನಂತರ ಬದನಗೋಡಿನ ಎಲ್ಲಾ ಬೀದಿಗಳಲ್ಲೂ ಸಂಚರಿಸಿ ದೇವಸ್ಥಾನಕ್ಕೆ ತಲುಪಿ, ದೇವಿಯ ಮೂರ್ತಿಯನ್ನು ದೇವಸ್ಥಾನದೊಳಗಿರಿಸಿ, ನಂತರ ಅದೇ ಬಂಡಿಯಲ್ಲಿ ದೇವಿಕೆರೆಯಿಂದ ನೀರನ್ನು ತಂದು ಮುತ್ತೈದೆಯರಿಂದ ಅಡುಗೆ ಮಾಡಿ ಬುಧವಾರ ಬೆಳಗಿನಜಾವ 4 ಗಂಟೆಗೆ ಶ್ರೀ ದೇವಿಗೆ ಎಡೆ ಇಟ್ಟು ಮಹಾಮಂಗಳಾರತಿ ಮಾಡಿ ಪೂಜೆ ನೆರವೇರಿಸಲಾಯಿತು.
ದೇವಿಗೆ ಮಹಾಮಂಗಳಾರತಿ ಮುಗಿದ ಮೇಲೆ ಭಕ್ತಾಧಿಗಳಿಂದ ತುಲಾಭಾರ ಸೇವೆ, ಹಣ್ಣು ಕಾಯಿ,ಇತರ ಸೇವೆಗಳು ನೆರವೇರಿತು. 12.30ರಿಂದ ಅನ್ನಸಂತರ್ಪಣೆ ಪ್ರಾರಂಭವಾಯಿತು. ಸುಮಾರು 35ಸಾವಿರ ಭಕ್ತರು ಅನ್ನಪ್ರಸಾದವನ್ನು ಸ್ವೀಕರಿಸಿದರು. ಯಾವುದೇ ಜಾತಿಬೇಧವಿಲ್ಲದೇ ಬದನಗೋಡ, ರಂಗಾಪುರ ಹಾಗೂ ದಾಸನಕೊಪ್ಪ ಮೂರು ಊರಿನ ಭಕ್ತರು ಈ ಜಾತ್ರೆಯಲ್ಲಿ ಸೇವೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾದರು.