ಸಿದ್ದಾಪುರ: ಜಿಲ್ಲಾದ್ಯಂತ ಅರಣ್ಯ ಸಿಬ್ಬಂದಿಗಳಿಂದ ದೌರ್ಜನ್ಯಕ್ಕೆ ಒಳಗಾದ ಅರಣ್ಯವಾಸಿಗಳಿಗೆ ಕಾನೂನಾತ್ಮಕ ಮತ್ತು ನ್ಯಾಯ ಒದಗಿಸುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳ ಮನೆ ಮನೆಗೆ ಭೇಟಿ ನೀಡುವ ವಿನೂತನ ಕಾರ್ಯಕ್ರಮವನ್ನು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಹಮ್ಮಿಕೊಳ್ಳಲು ನಿರ್ಧರಿಸಿದೆ ಎಂದು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಅವರು ತಾಲೂಕಿನ ಅರಣ್ಯವಾಸಿಗಳ ಹೋರಾಟಗಾರರ ಪ್ರಮುಖರನ್ನು ಭೇಟಿ ನೀಡಿದ ಸಂದರ್ಭದಲ್ಲಿ ಮುಂದಿನ ಹೋರಾಟದ ರೂಪು ರೇಷೆಗಳನ್ನು ನಿರ್ಧರಿಸಿದ ನಂತರ ಮೇಲಿನಂತೆ ಅವರು ಹೇಳಿದರು.
ಅರಣ್ಯ ಹಕ್ಕು ಕಾಯಿದೆ ಹಾಗೂ ಉಸ್ತುವಾರಿ ಸಚಿವರ ಸ್ಪಷ್ಟ ನಿರ್ದೇಶನ ಅರಣ್ಯವಾಸಿಗಳ ಪರವಾಗಿ ಇದ್ದಾಗಲೂ ಜಿಲ್ಲೆಯ ಅರಣ್ಯ ಸಿಬ್ಬಂದಿಗಳು ಅರಣ್ಯವಾಸಿಗಳ ಮೇಲೆ ನಿರಂತರ ದೌರ್ಜನ್ಯ, ಕಿರುಕುಳ, ಮಾನಸಿಕ ಹಿಂಸೆ ಮುಂದುವರೆಸಿರುವುದರಿಂದ ದೌರ್ಜನ್ಯಕ್ಕೆ ಒಳಗಾದ ಅರಣ್ಯವಾಸಿಗಳ ಮನೆ ಮನೆಗೆ ಭೇಟಿ ಕೊಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಭ್ಲೇಶ್ವರ ನಾಯ್ಕ ಬೇಡ್ಕಣಿ, ಸುನೀಲ್ ನಾಯ್ಕ ಸಂಪಖಂಡ, ದಿನೇಶ್ ನಾಯ್ಕ ಬೇಡ್ಕಣಿ, ಕೆ.ಟಿ. ನಾಯ್ಕ ಕ್ಯಾದಗಿ, ರಾಘವೇಂದ್ರ ನಾಯ್ಕ ಕವಂಚೂರು, ಜೈವಂತ ನಾಯ್ಕ ಕಾನಗೋಡ, ಮಾಜೀರಾ ಬೇಗಂ ಕಾನಗೋಡ, ರವಿ ನಾಯ್ಕ ಹಂಜಗಿ, ಪಾಂಡು ನಾಯ್ಕ ಚೆನ್ನಮಾಂವ್, ರಾಧಾ ನಾಯ್ಕ ಹುಲಿಮನೆ, ಕೆ ಆರ್ ನಾಯ್ಕ ಹಲಗೇರಿ, ಗೋಪಾಲ ನಾಯ್ಕ ವಾಜಗೋಡ, ತಿಮ್ಮಪ್ಪ ನಾಯ್ಕ ಬಿದ್ರಕಾನ್, ಜಗದೀಶ್ ನಾಯ್ಕ ಶಿರಳಗಿ, ಭಾಸ್ಕರ ನಾಯ್ಕ ಮುಗ್ದುಲ್, ಗೋವಿಂದ ಗೌಡ ಕಿಲವಳ್ಳಿ, ಸುಧಾಕರ ಮಡಿವಾಳ ಬಿಳಗಿ ಮುಂತಾದವರು ಉಪಸ್ಥಿತರಿದ್ದರು.
ಜೊಯಿಡಾದಿಂದ ಪ್ರಾರಂಭ:
ಅರಣ್ಯವಾಸಿಗಳ ಮನೆ ಮನೆಗೆ ಭೇಟಿ ಕಾರ್ಯಕ್ರಮವನ್ನು–ಉತ್ತರ ಕನ್ನಡ ಜಿಲ್ಲೆಯಲ್ಲಿ ಜೊಯಿಡಾ ತಾಲೂಕಿನ, ಉಳುವಿ ಗ್ರಾಮ ಪಂಚಾಯತದಿಂದ ಪ್ರಾರಂಭಿಸಲಾಗುವುದು. ಮುಂದಿನ ಒಂದು ತಿಂಗಳಾದ್ಯಂತ ಹೋರಾಟದ ವಾಹಿನಿಗಳ ಮೂಲಕ ಎಲ್ಲಾ ತಾಲೂಕಿನಲ್ಲೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.