ಮುಂಡಗೋಡ: ದೇಶದಲ್ಲಿ ನಮಗೆ ಕೇವಲ 3% ಇರುವ ಸಮುದಾಯ ಆಳುತ್ತಿದೆ, ಏಕೆಂದರೆ ಅವರು ಶಿಕ್ಷಣವಂತರಿದ್ದಾರೆ. ಆದ್ದರಿಂದ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವುದು ಅವಶ್ಯಕ ಎಂದು ಚಿತ್ರದುರ್ಗದ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ತಾಲೂಕಿನ ಮಳಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿದ್ದನಕೊಪ್ಪ ಗ್ರಾಮದಲ್ಲಿ ತಾಲೂಕಾ ಭೋವಿಸಮಾಜ ಹಮ್ಮಿಕೊಂಡಿದ್ದ ಸಮಾಜ ಜನಜಾಗೃತಿ ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡಿದರು. ಭೋವಿ ಸಮಾಜ ಯಾವತ್ತು ತಲೆ ಒಡೆದು ತಿನ್ನುವುದಿಲ್ಲ, ಕಲ್ಲು ಒಡೆದು ಬೆವರು ಹರಿಸಿ ಸಂಸಾರ ನಿಭಾಯಿಸುತ್ತದೆ. ನಾವು ನಮ್ಮ ಜನಪ್ರತಿನಿದಿಗಳ ಆಯ್ಕೆಯ ವೇಳೆ ಯೋಚಿಸಿ ಮತ ಚಲಾಯಿಸಬೇಕು ಎಂದರು.
ಜಿ.ಪಂ ಮಾಜಿ ಅಧ್ಯಕ್ಷ ರಾಮಕೃಷ್ಣ ಮೂಲಿಮನಿ ಮಾತನಾಡಿ, ನಾವು ಹಲವಾರು ಬಾರಿ ನಮ್ಮ ಸಮಾಜಕ್ಕೆ ಬೇಡಿಕೆ ಇಟ್ಟಾಗ ಚುನಾವಣೆ ಸಂದರ್ಭದಲ್ಲಿ ಓಕೆ ಎಂದವರು ಅಧಿಕಾರ ಬಂದರೆ ತಿರುಗಿ ನೋಡಿಲ್ಲ ಎಂದರು.
ಹಾವೇರಿ ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ರವಿ ಪೂಜಾರಿ, ತಾಲೂಕಾ ಅಧ್ಯಕ್ಷ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಶಿವಾಜಿ ಭೋವಿವಡ್ಡರ ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ನಾಗರಾಜ ಕಳಸಾಪೂರ ಮಾಡಿದರು. ವೇದಿಕೆ ಮೇಲೆ ಪ.ಪಂ ಅಧ್ಯಕ್ಷೆ ಜಯಸುಧಾ ಭೋವಿವಡ್ಡರ, ಕೃಷ್ಣ ಹಿರಳ್ಳಿ, ಶಿವಾನಂದ ದೇಸಳ್ಳಿ ಇದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಭೋವಿ ಸಮಾಜದ ವ್ಯಕ್ತಿಗಳಿಗೆ ಸನ್ಮಾನ ಮಾಡಲಾಯಿತು.