ಯಲ್ಲಾಪುರ: ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ ಜಮಗುಳಿ ಗ್ರಾಮಕ್ಕೆ ತಾಲೂಕಾಡಳಿತದ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಗ್ರಾಮಸ್ಥರ ಮನವೊಲೈಸುವ ಪ್ರಯತ್ನ ನಡೆಸಿದರು.
ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕಾಗಿದ್ದು, ಇದನ್ನು ಕಳೆದುಕೊಳ್ಳದಂತೆ ಅಧಿಕಾರಿಗಳು ಮನವಿ ಮಾಡಿದರು. ಈ ವೇಳೆ ಊರಿನವರು ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿಸಿದರು. ಮುಖ್ಯವಾಗಿ ಕಳೆದ 10 ವರ್ಷಗಳಿಂದ ಮನವಿ ಸಲ್ಲಿಸಿದರೂ ರಸ್ತೆ ಸಮಸ್ಯೆ ಹಾಗೇ ಇರುವ ಬಗ್ಗೆ ಗಮನ ಸೆಳೆದರು.
ರಾಷ್ಟ್ರೀಯ ಹೆದ್ದಾರಿ ತಿರುವಿನಿಂದ ಊರಿನವರೆಗೆ ಅಂದಾಜು 2ಕಿಮೀ ಸಿಮೆಂಟ್ ರಸ್ತೆ ನಿರ್ಮಿಸುವಂತೆ ಊರಿನವರು ಆಗ್ರಹಿಸಿದರು. ಸಮಸ್ಯೆಯನ್ನು ಪರಿಶೀಲಿಸಿದ ತಹಶೀಲ್ದಾರ್ ಹಾಗೂ ಇನ್ನಿತರ ಅಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸುವ ಭರವಸೆ ನೀಡಿದರು. ರಸ್ತೆ ಆಗುವವರೆಗೂ ತಮ್ಮ ನಿರ್ಣಯ ಬದಲಿಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದರು.