ಶಿರಸಿ: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರದ ಗೀಳನ್ನು ಆರಂಭಿಸಿದ್ದಾರೆ. ಅಲ್ಲದೇ ಕ್ರೀಡೆ, ನಾಟಕ ಇತ್ಯಾದಿಗಳಿಗೆ ಉದಾರ ದಾನವನ್ನು ನೀಡಲಾರಂಭಿಸಿದ್ದಾರೆ. ಅದರಂತೆ ಪ್ರತಿ ಹಳ್ಳಿಗಳಲ್ಲೂ ರಾತ್ರಿಯಾದರೆ ಸಾಕು ಕಬಡ್ಡಿ, ವಾಲಿಬಾಲ್, ನಾಟಕ ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತಲೆ ಇವೆ. ಆದರೆ ಇದರ ಲಾಭ ಮಾತ್ರ ಸ್ಥಳೀಯ ಕೆಲ ‘ರಕ್ಷಣೆ ಮಾಡುವವರ’ ಹಾಗೂ ಜುಗಾರಿ ಆಡಿಸುವ ದಂಧೆಕೋರರಿಗೆ ವರದಾನವಾಗಿ ಪರಿಣಮಿಸಿದೆ ಎಂಬ ಆರೋಪ ಕೇಳಿಬಂದಿದೆ.
ಇತ್ತೀಚಿನ ದಿನಗಳಲ್ಲಿ ಕೆಲ ಠಾಣೆಗಳಲ್ಲಿ ಮತ್ತೆ ಓಸಿ, ಇಸ್ಪೀಟು, ಗುಡು ಗುಡಿಯಂಥ ಅಕ್ರಮ ದಂಧೆಗಳು ತಲೆ ಎತ್ತಿವೆ. ತಾಲೂಕಿನ ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಗಳಲ್ಲಿ ರಾತ್ರಿ ವೇಳೆಯಲ್ಲಿ ರಾಜಾರೋಷವಾಗಿ ಜೂಜುಕೋರರು ಜುಗಾರಿ ಆರಂಭಿಸಿದ್ದಾರೆ. ಯಾವುದೇ ಆಟ, ನಾಟಕವಾದಲ್ಲಿ ಗುಡು ಗುಡಿ ಆಟದ ಶಬ್ದ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಮಾಹಿತಿ ಇದ್ದರೂ ಸಂಬoಧಪಟ್ಟವರ ಹೊಂದಾಣಿಕೆಯಿoದಾಗಿ ದಾಳಿಗಳೇ ನಡೆಯುತ್ತಿಲ್ಲ ಎಂಬ ದೂರು ಕೇಳಿಬಂದಿದೆ.