ಶಿರಸಿ ತಾಲೂಕಿನ ದೊಡ್ನಳ್ಳಿ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ, ಭಾರತೀಯ ಸಂಗೀತ ಪರಿಷತ್ ಹಾಗೂ ದೊಡ್ನಳ್ಳಿ ಗ್ರಾಮಸ್ಥರ ಸಹಯೋಗದಲ್ಲಿ ಫೆಬ್ರವರಿ 18 ಮಹಾಶಿವರಾತ್ರಿಯಂದು ಇಳಿಹೊತ್ತು 4-00 ಘಂಟೆಯಿಂದ ರಾತ್ರಿಯ ಪ್ರಥಮ ಪ್ರಹರದವರೆಗೆ ನಾದಾಭಿಷೇಕ ಹಾಗೂ ಪದ್ಮಭೂಷಣ ಪಂಡಿತ ಬಸವರಾಜ ರಾಜಗುರು ಸ್ಮೃತಿ – 25 ಸಂಗೀತೋತ್ಸವ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮದಲ್ಲಿ ರಾಜಗುರು ರಾಷ್ಟ್ರೀಯ ಟ್ರಸ್ಟನ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನಾಗರಿಕ ಸನ್ಮಾನ ಹಾಗೂ ಪಂಡಿತ ಪ್ರಭಾಕರ ಭಟ್ಟ ಕೆರೆಕೈ ಬೆಂಗಳೂರು ಇವರಿಗೆ ಕಲಾಸನ್ಮಾನ ನಡೆಯಲಿದೆ. ಶಂಭುಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಶ್ರೀಪಾದ ಹೆಗಡೆ ದೊಡ್ನಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟನ ಟ್ರಸ್ಟಿಗಳಾದ ಶ್ರೀಮತಿ ಭಾರತಿದೇವಿ ರಾಜಗುರು ಹಾಗೂ ನಿಜಗುಣ ರಾಜಗುರು ಧಾರವಾಡ, ಆರ್. ಎನ್. ಭಟ್ಟ ಸುಗಾವಿ, ಎಸ್.ಎನ್. ಹೆಗಡೆ ದೊಡ್ನಳ್ಳಿ ಹಾಗೂ ಶ್ರೀಪಾದ ರಾಯಸದ್ ಇವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ರಾಜಗುರು ಸ್ಮೃತಿ ಸಂಗೀತೋತ್ಸವ –25 ರಲ್ಲಿ ಅತಿಥಿ ಕಲಾವಿದರಾಗಿ ಪಂಡಿತ ಪ್ರಭಾಕರ ಭಟ್ಟ ಕೆರೆಕೈ ಬೆಂಗಳೂರು ಹಾಗೂ ಕಿರಣ ಭಟ್ಟ ಕೆರೆಕೈ ಬೆಂಗಳೂರು ಇವರ ಜುಗಲಬಂದಿ ಗಾಯನ, ಡಾ. ಕೃಷ್ಣಮೂರ್ತಿ ಭಟ್ಟ ಬೊಮ್ನಳ್ಳಿ ಗಾಯನ, ಶ್ರೀಮತಿ ಸುನಿತಾ ಭಟ್ಟ ಗಾಯನ, ವಿನಾಯಕ ಸಾಗರ, ರಾಮದಾಸ ಭಟ್ಟ ಶಿರಸಿ ಇವರ ತಬಲಾ ಜುಗಲಬಂದಿ ಕುಮಾರಿ ಗಗನಾ ಭಟ್ಟ ಬೊಮ್ನಳ್ಳಿ ಗಾಯನ ಕಾರ್ಯಕ್ರಮ ನಡೆಯಲಿದೆ. ಸಂವಾದಿನಿಯಲ್ಲಿ ವಿದ್ವಾನ್ ಪ್ರಕಾಶ ಹೆಗಡೆ ಯಡಳ್ಳಿ ಹಾಗೂ ಡಾ. ಸಮೀರ್ ಬಾದ್ರಿ ಸಿದ್ದಾಪುರ ಇವರು ಪಾಲ್ಗೊಳ್ಳುವರು. ಅರುಣ ಭಟ್ಟ ಕೆರೆಕೈ ತಬಲಾ ಸಾಥ ನೀಡುವರು.
ಮಹಾಶಿವರಾತ್ರಿಯ ಪರ್ವಕಾಲದಲ್ಲಿ ನಡೆಯುವ ಈ ಸಂಗೀತೋತ್ಸವಕ್ಕೆ ಸಂಗೀತಾಸಕ್ತರು ಬಂದು ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.