ಭಟ್ಕಳ: ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿರುವ 24 ಸಿಬ್ಬಂದಿಗಳ ಹಾಗೂ ಆಡಳಿತ ಕಮಿಟಿಯ ವಿರುದ್ಧ ಹೈಕೋರ್ಟ್ ಆದೇಶದಂತೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿಯಿಂದ ಉಪವಿಭಾಗಾಧಿಕಾರಿ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ರವಾನಿಸಲಾಯಿತು.
ಪಿಎಲ್‌ಡಿ ಬ್ಯಾಂಕ್‌ನಲ್ಲಿ 24 ಸಿಬ್ಬಂದಿಗಳ ನೇಮಕಾತಿಗೆ ನಡೆದ ಅವ್ಯವಹಾರವನ್ನು ನಮ್ಮ ಸಂಘಟನೆಯ ಉಪಾಧ್ಯಕ್ಷ ಶಂಕರ ನಾಯ್ಕ ಇವರ ದೂರಿನ ಮೇರೆಗೆ, 24 ಸಿಬ್ಬಂದಿಗಳನ್ನು ನೇಮಕ ಮಾಡುವಾಗ ಇಲಾಖೆಯ ವೃಂದ ಬಲದ ಆದೇಶದ ವಿರುದ್ಧ, ಅಂದರೆ ನೇಮಕಾತಿಯ ನಿಯಮಾವಳಿ 17 ಹಾಗೂ 18ನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದರಿAದ ಆಡಳಿತ ಕಮಿಟಿಯನ್ನು 29 (ಸಿ)ರಡಿ ಅನರ್ಹಗೊಳಿಸಲು ಮತ್ತು 24 ಸಿಬ್ಬಂದಿಗಳನ್ನು ವಜಾಗೊಳಿಸುವಂತೆ ಕಲಂ 65ರಡಿ ಭಟ್ಕಳ ಸಹಕಾರಿ ಅಭಿವೃದ್ಧಿ ಅಧಿಕಾರಿ ವರದಿ ನೀಡಿದ್ದಾರೆ. ಹೈಕೋರ್ಟ್ ಆದೇಶದಂತೆ ಸಹಕಾರಿ ಸಂಘಗಳು ಉಪನಿಬಂಧಕರು 2021ರ ಡಿ.30ರಂದು ನೋಟಿಸ್ ಹೊರಡಿಸಿ, ಅಂದಿನಿಂದ ವಿಚಾರಣೆ ಮುಂದೂಡುತ್ತಲೇ ಬರುತ್ತಿದ್ದು, ಇದೀಗ ಮತ್ತೆ ಫೆ.21ಕ್ಕೆ ವಿಚಾರಣೆ ನಿಗದಿಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಹೈಕೋರ್ಟ್ 24 ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಸಹಕಾರಿ ಸಂಘಗಳ ನಿಬಂಧಕರು ಮತ್ತು ಕಾಸ್ಕಾರ್ಡ್ ಬ್ಯಾಂಕ್‌ನ ವ್ಯವಸ್ಥಾಪಕರ ನಿರ್ದೇಶಕರು ಇನ್ನೂ ತನಕ ಯಾವುದೇ ಪ್ರಕ್ರಿಯೆಯನ್ನು ಮುಂದುವರಿಸದೆ ಕಾಲಹರಣ ಮಾಡುತ್ತಿದ್ದಾರೆ. ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿರುವುದಲ್ಲದೇ ಸಂವಿಧಾನ ಹಾಗೂ ಇಲಾಖೆ ಸುತ್ತೋಲೆ ನಿಯಮಗಳಿಗೆ ಅಗೌರವ ತೋರಿದ್ದಾರೆ. ಆದ್ದರಿಂದ ಈ ಕೂಡಲೇ ಕ್ರಮ ಕೈಗೊಳ್ಳದೇ ಹೋದರೆ ಸಂಬಂಧಪಟ್ಟ ಇಲಾಖೆಯ ಮುಂದೆ ನಾವು ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರ ನೇತೃತೃದಲ್ಲಿ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಬೆಳಗಾವಿ ಉಸ್ತುವಾರಿ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರ್ಜುನ ಮಲ್ಯ, ತಾಲೂಕು ಅಧ್ಯಕ್ಷ ನಾಗೇಂದ್ರ ನಾಯ್ಕ, ಉಪಾಧ್ಯಕ್ಷ ಶಂಕರ ನಾಯ್ಕ, ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ, ಸಹ ಕಾರ್ಯದರ್ಶಿ ವಸಂತ ದೇವಾಡಿಗ, ಸದಸ್ಯ ವಾಸುದೇವ ಮೊಗೇರ ಮುಂತಾದವರು ಇದ್ದರು.