ಹೊನ್ನಾವರ: ಶೈಕ್ಷಣಿಕ ಸಾಲ ಪಡೆದು ಉದ್ಯೋಗ ಸಿಗದೆ ಪರದಾಡುತ್ತಿರುವ ನಿರುದ್ಯೋಗಿಗಳ ನೆರವಿಗೆ ಸರ್ಕಾರ ಮುಂದಾಗುವಂತೆ ಕರುನಾಡ ವಿಜಯಸೇನೆ ಒತ್ತಾಯಿಸಿದೆ.
ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಪ್ರತಿಬಾರಿಯು ವಿವಿಧ ಪಕ್ಷದವರು ಸಾಲಮನ್ನಾ ಬಗ್ಗೆ ಆಶ್ವಾಸನೆ ನೀಡುತ್ತಾ ಬಂದಿದೆ. ಅಧಿಕಾರಕ್ಕೆ ಬಂದಾಗಲೂ ಹಲವು ಬಾರಿ ಸಾಲಮನ್ನಾ ಮಾಡಿದೆ. ವಿವಿಧ ಭಾಗ್ಯಗಳ ಹೆಸರುಗಳ ಮೂಲಕ ನೆರವು ನೀಡಿದೆ. ಆದರೆ ಇದುವರೆಗೂ ಉದ್ಯೋಗಕ್ಕೆ ವಿಶೇಷ ಯೋಜನೆ ಹಮ್ಮಿಕೊಂಡಿಲ್ಲ. ಶೈಕ್ಷಣಿಕ ಪ್ರಗತಿಗಾಗಿ ಹಲವು ಬ್ಯಾಂಕ್ ಮೂಲಕ ಶೈಕ್ಷಣಿಕ ಸಾಲ ಪಡೆದ ಸಾವಿರಾರು ಯುವಕರು, ವಿದ್ಯಾಭ್ಯಾಸ ಮುಗಿದ ಬಳಿಕ ಉದ್ಯೋಗ ಸಿಗದೇ ಪರದಾಡುತ್ತಿದ್ದಾರೆ. ಈ ಹಂತದಲ್ಲಿ ಬ್ಯಾಂಕನವರು ಹಣ ಪಾವತಿ ಮಾಡುವಂತೆ ಪೀಡಿಸುತ್ತಾರೆ. ಉದ್ಯೋಗ ಸಿಗದೇ ಹಣ ಪಾವತಿಸುದು ಕಷ್ಟವಾಗಿದ್ದು, ಇವರ ನೆರವಿಗೆ ಆಡಳಿತವರ್ಗ ಬರಬೇಕಿದೆ. ಉದ್ಯೋಗ ಸಿಗುವವರೆಗೂ ಸಾಲ ಮರುಪಾವತಿಸಲು ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ವಿವಿಧ ಕಂಪನಿಯ ಕ್ಯಾಂಪಸ್ ಸಂದರ್ಶನ ಸರ್ಕಾರಿ ಕಾಲೇಜಿನಲ್ಲಿ ಮಾಡುವ ಬದಲು ಖಾಸಗಿ ಶಾಲೆಗಳ ಮೊರೆ ಹೋಗುತ್ತದೆ. ಸರ್ಕಾರ ಈ ಬಗ್ಗೆ ಅಧಿವೇಶನದಲ್ಲಿ ವಿಶೇಷ ನಿಯಮಾವಳಿ ರೂಪಿಸಿ 90% ಕ್ಯಾಂಪಸ್ ಸಂದರ್ಶನ ಸರ್ಕಾರಿ ಕಾಲೇಜಿನಲ್ಲಿ ನಡೆಸುವಂತೆ ಕಾನೂನು ಜಾರಿಗೊಳಿಸುವ ಮೂಲಕ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳ ನೆರವಿಗೆ ಮುಂದಾಗಬೇಕು. ವಿದ್ಯಾಭ್ಯಾಸ ಮುಗಿದ ಬಳಿಕ ಉದ್ಯೋಗ ಸಿಗುವವರೆಗೂ ಒತ್ತಡ ಹಾಕದೇ ಮರುಪಾವತಿಸಲು ಸಮಯವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ ನಾಯ್ಕ ಹಡಿಕಲ್ ಮಾತನಾಡಿ, ಸರ್ಕಾರ ಹಲವು ಬಾರಿ ಉದ್ಯೋಗ ಭರ್ತಿಗೆ ಮುಂದಾಗಿ ಭೃಷ್ಟಾಚಾರ, ಅಕ್ರಮದಿಂದ ನೇಮಕಾತಿ ಪ್ರಕ್ರಿಯೆ ಮುಂದೂಡುತ್ತಿದೆ. ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕೆ ಅರ್ಜಿ ಹಾಕಿದವರು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾಗ ಬ್ಯಾಂಕನವರು ಶೈಕ್ಷಣಿಕ ಸಾಲ ಮರುಪಾವತಿಗೆ ಒತ್ತಾಯಿಸುತ್ತಿದ್ದಾರೆ. ಇದು ಬಡ ಹಾಗೂ ಮಧ್ಯಮವರ್ಗದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಸರ್ಕಾರ ಶೈಕ್ಷಣಿಕ ಸಾಲ ಪಡೆದವರಿಗೆ ನೆರವಾಗಲು 50% ಮನ್ನಾ ಅಥವಾ ಬಡ್ಡಿ ಮನ್ನಾ ಮಾಡುವ ಮೂಲಕ ನೆರವಾಗಬೇಕು. ಮುಂದಿನ ದಿನದಲ್ಲಿ ಬಡ್ಡಿರಹಿತ ಸಾಲ ನೀಡುವತ್ತ ಸರ್ಕಾರ ಚಿಂತನೆ ನಡೆಸಿ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಶೈಕ್ಷಣಿಕವಾಗಿ ನೆರವಾಗಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಪದಾಧಿಕಾರಿಗಳಾದ ನಿತಿನ್ ಆಚಾರ್ಯ, ಸೂರಜ ಪಾಲೇಕರ್, ಸಂದೇಶ್ ನಾಯ್ಕ, ರಾಜಶೇಖರ್ ಶೇಟ್, ಮಹೇಶ್ ಮೇಸ್ತಾ, ಶ್ರೀನಿವಾಸ ನಾಯ್ಕ, ಗಜು ಶೇಟ್, ಸಾದಿಕ್ ಖಾನ್, ಮಿಥುನ್ ಮೇಸ್ತಾ ಇದ್ದರು.