ಕಾರವಾರ: ಆದಷ್ಟು ಶೀಘ್ರದಲ್ಲಿ ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳುವಂತೆ ಶಾಸಕಿ ರೂಪಾಲಿ ಎಸ್.ನಾಯ್ಕ ವಿಧಾನಸಭೆಯ ಗಮನ ಸೆಳೆದರು.
ಅದೆಷ್ಟೋ ವರ್ಷಗಳಿಂದ ಬಡತನದಲ್ಲೇ ಬದುಕು ನಡೆಸುತ್ತಿರುವ ಹಾಲಕ್ಕಿ ಸಮುದಾಯದವರು ಜಿಲ್ಲೆಯಲ್ಲಿ ಸುಮಾರು 1.45 ಲಕ್ಷದಷ್ಟಿದ್ದಾರೆ. ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ 46 ಸಾವಿರದಷ್ಟು ಜನರಿದ್ದಾರೆ. ಇವರ ಬಹುಕಾಲದ ಬೇಡಿಕೆಯನ್ನು ಶೀಘ್ರದಲ್ಲಿ ಈಡೇರಿಸುವಂತೆ ಒತ್ತಾಯಿಸಿದರು.
ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ವರದಿ ನೀಡಲಾಗಿತ್ತು. ಆ ಬಗ್ಗೆ ಮತ್ತೆ ಸ್ಪಷ್ಟೀಕರಣ ಕೇಳಿದ್ದರಿಂದ ಮತ್ತೆ ಅಧ್ಯಯನ ವರದಿ ಸಿದ್ಧವಾಗಿದೆ. ಅದನ್ನು ಕೇಂದ್ರಕ್ಕೆ ಶೀಘ್ರದಲ್ಲಿ ಕಳುಹಿಸಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕೆಂದು ಶಾಸಕರು ಕೈಮುಗಿದು ವಿನಂತಿಸಿದರು.
ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಬೇಡಿಕೆ ಬಹುಕಾಲದಿಂದ ಇದೆ. ಆದಷ್ಟು ಶೀಘ್ರದಲ್ಲಿ ಈ ಬೇಡಿಕೆ ಈಡೇರಬೇಕು. ಜಿಲ್ಲೆಯ ವಿವಿಧೆಡೆ ಹಾಗೂ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇರುವ ಇವರ ಬೇಡಿಕೆಯನ್ನು ತ್ವರಿತಗತಿಯಲ್ಲಿ ಈಡೇರಿಸಲು ಕ್ರಮ ಕೈಗೊಳ್ಳುವಂತೆ ರೂಪಾಲಿ ಎಸ್.ನಾಯ್ಕ ಮೇಲಿಂದ ಮೇಲೆ ವಿನಂತಿಸಿದರು.