ದಾಂಡೇಲಿ: ಹಳಿಯಾಳ, ದಾಂಡೇಲಿ, ಜೊಯಿಡಾ ವಿಧಾನಸಭಾ ಕ್ಷೇತ್ರದ ಮರಾಠಾ ರಾಜಕೀಯ ಚಿಂತನ- ಮಂಥನ ಸಭೆಯು ನಗರದ ಮರಾಠಾ ಸಮಾಜ ಭವನದಲ್ಲಿ ನಡೆಯಿತು.
ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ.ಆರ್.ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಡಾ.ಮೋಹನ್ ಪಾಟೀಲ್ ವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪಾಟೀಲ್, ಹಳಿಯಾಳ, ದಾಂಡೇಲಿ, ಜೊಯಿಡಾ ವಿಧಾನಸಭಾ ಕ್ಷೇತ್ರದಲ್ಲಿ ಬಹುಸಂಖ್ಯಾತ ಮರಾಠಾ ಸಮುದಾಯದ ಜನರಿದ್ದರೂ, ನಮ್ಮ ಸಮಾಜಕ್ಕೆ ಒಂದೇ ಒಂದು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದ ವತಿಯಿಂದ ಸ್ಪರ್ಧಿಸಲಾಗಿಲ್ಲ. ನಮ್ಮ ಮತವನ್ನು ಬಯಸಿ ಇನ್ನೊಬ್ಬರು ಗೆಲ್ಲುವುದಾದರೆ, ಅದೇ ಮತವನ್ನು ಬಳಸಿ ನಮ್ಮ ಸಮಾಜದದವರು ಯಾಕೆ ವಿಧಾನಸಭಾ ಸದಸ್ಯರಾಗಬಾರದು. ಈ ಹಿನ್ನಲೆಯಲ್ಲಿ ಮರಾಠಾ ಸಮಾಜ ಬಾಂಧವರು ಒಂದಾಗಬೇಕೆನ್ನುವ ದೃಷ್ಟಿಯಿಂದ ಈ ಸಭೆಯನ್ನು ಕರೆಯಲಾಗಿದ್ದು, ನಮ್ಮ ಸಮುದಾಯಕ್ಕೆ ಟೀಕೆಟ್ ನೀಡುವುದಾದರೇ ಅಂತಹ ಅಭ್ಯರ್ಥಿಯನ್ನು ಸಮಾಜಬಾಂಧವರು ಗೆಲ್ಲಿಸಲು ಪಣ ತೊಡಬೇಕೆಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಮೋಹನ ಪಾಟೀಲ್, ಮರಾಠಾ ಸಮಾಜಕ್ಕೆ ಮೊದಲ ಪ್ರಾತಿನಿಧ್ಯವನ್ನು ಈ ಬಾರಿಯಾದರೂ ಪ್ರಮುಖ ರಾಜಕೀಯ ಪಕ್ಷಗಳು ನೀಡಬೇಕೆಂದು ಮನವಿ ಮಾಡಿದರು.
ದಾಂಡೇಲಿ ಟ್ರಾನ್ಸಪೋರ್ಟ್ ಅಸೋಸಿಯೇಶನ್ ಅಧ್ಯಕ್ಷ ದಿನೇಶ ಹಳದನಕರ್, ಜೊಯಿಡಾ ತಾಲೂಕಿನ ಮರಾಠಾ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಸಾಯಿ, ಹುಬ್ಬಳ್ಳಿಯ ಬಾಲಾಜಿ ರವಳನಾಥಕರ್, ಜೀಜಾಮಾತಾ ಕ್ಷತ್ರೀಯ ಸಮಾಜದ ಮಂಜುಳಾ ನಾಕಾಡೆ, ಪ್ರಮುಖರಾದ ಅಜೀತ್ ಥೋರವತ್ ಮತ್ತು ಲೀನಾ ಪಾಟೀಲ್ ಮೊದಲಾದವರು ಮಾತನಾಡಿ, ನಮ್ಮ ಸಮಾಜಕ್ಕೆ ಈ ಬಾರಿ ಪ್ರಾತಿನಿಧ್ಯ ಸಿಗಬೇಕು. ನಮ್ಮ ಸಮಾಜಕ್ಕೂ ರಾಜಕೀಯವಾಗಿ ಅಧಿಕಾರ ಸಿಗಬೇಕಾಗಿದ್ದು, ಈ ನಿಟ್ಟಿನಲ್ಲಿ ಮರಾಠಾ ಸಮಾಜ ಬಾಂಧವರು ಒಂದಾಗಬೇಕೆಂದು ಕರೆ ನೀಡಿದರು.
ಅಶೋಕ್ ಮಿರಾಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜದ ಪ್ರಮುಖರು ಹಾಗೂ ಕಾರ್ಮಿಕ ಮುಖಂಡರಾದ ಭರತ್ ಪಾಟೀಲ್ ಸ್ವಾಗತಿಸಿ, ನಿರೂಪಿಸಿದ ಕಾರ‍್ಯಕ್ರಮಕ್ಕೆ ವಿಠ್ಠಲ ಬೈಲೂರಕರ ವಂದಿಸಿದರು.