ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಫೆ.16, ಗುರುವಾರ ನವದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಆದಿ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ.
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ, 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಂದು ಸಾವಿರ ಬುಡಕಟ್ಟು ಕುಶಲಕರ್ಮಿಗಳು ಮತ್ತು ಕಲಾವಿದರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಆತ್ಮನಿರ್ಭರ ಭಾರತದ ದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಬುಡಕಟ್ಟು ಸಮುದಾಯಗಳ ಸಂಪೂರ್ಣ ಭಾಗವಹಿಸುವಿಕೆ ಮತ್ತು ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಬುಕಟ್ಟು ಸಚಿವಾಲಯವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಮುಂಡಾ ಹೇಳಿದ್ದಾರೆ.
ಆದಿ ಮಹೋತ್ಸವವು ಬುಡಕಟ್ಟು ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಉತ್ತೇಜಿಸಲು ಪ್ರಮುಖ ವೇದಿಕೆಯಾಗಿದೆ ಎಂದು ಸಚಿವರು ಹೇಳಿದರು. ಪ್ರಮುಖ ನಗರಗಳಲ್ಲಿ ಆದಿ ಮಹೋತ್ಸವವನ್ನು ಆಯೋಜಿಸುವ ಪರಿಕಲ್ಪನೆಯು ಮಧ್ಯವರ್ತಿಗಳನ್ನು ತೊಡೆದುಹಾಕಲು ಮತ್ತು ದೊಡ್ಡ ಮಾರುಕಟ್ಟೆಗಳಿಗೆ ನೇರ ಪ್ರವೇಶವನ್ನು ಒದಗಿಸುವ ಮೂಲಕ ಬುಡಕಟ್ಟು ಕುಶಲಕರ್ಮಿಗಳಿಗೆ ವರದಾನವಾಗಿದೆ.