ಕಾರವಾರ: ನಗರ ವ್ಯಾಪ್ತಿಯಲ್ಲಿ ತನ್ನ ಸಹಚರರೊಂದಿಗೆ ಓಸಿ, ಮಟಕಾ ಜುಗಾರಾಟ ಆಡಿಸುವುದು ಮತ್ತು ಸಾರ್ವಜಿನಿಕರಿಗೆ ಆಡಲು ಪ್ರೋತ್ಸಾಹಿಸುತ್ತಿದ್ದ ತಾಲೂಕಿನ ಚಿತ್ತಾಕುಲಾ ವಿನಾಯಕ ಹರಿಕಂತ್ರ ಅಲಿಯಾಸ್ ಕಿಂಗ್‌ನನ್ನು ಗಡಿಪಾರು ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಈತನ ವಿರುದ್ದ ಕಳೆದ 2015ರಿಂದ ಈವರೆಗೆ ಒಟ್ಟೂ 11 ಜೂಜಾಟದ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲ್ಲಿ 6 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 3 ಪ್ರಕರಣಗಳು ಖುಲಾಸೆ ಹಾಗೂ 2 ಪ್ರಕರಣಗಳು ವಿಚಾರಣೆಯಲ್ಲಿದೆ. ಆದರೂ ಸಹ ಈತನು ತನ್ನ ಚಟುವಟಿಕೆಯನ್ನು ನಿರಂತರವಾಗಿ ಮುಂದುವರೆಸಿಕೊಂಡು ಬಂದಿದ್ದು, ಈತನ ಚಟುವಟಕೆಯನ್ನು ನಿಯಂತ್ರಿಸುವ ಸಲುವಾಗಿ ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡುವ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದು, ವರದಿಯನ್ನು ಆಧರಿಸಿ 6 ತಿಂಗಳವರೆಗೆ ಧಾರವಾಡ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.