ಹೊನ್ನಾವರ: ತಾಲೂಕಿನ ಸಂತೇಗುಳಿಯ ಮಹಾಸತಿ ಕ್ರೀಡಾಂಗಣದಲ್ಲಿ ಆಯೋಜಿಸಿದ ಮಹಾಸತಿ ಗೆಳೆಯರ ಬಳಗ ಆಯೋಜಿಸಿದ ಪ್ರಥಮ ವರ್ಷದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾವಳಿಗೆ ಹಳದೀಪರ ಗ್ರಾ.ಪಂ. ಅಧ್ಯಕ್ಷ ಅಜಿತ್ ನಾಯ್ಕ ಚಾಲನೆ ನೀಡಿದರು.
ನಂತರ ಮಾತನಾಡಿ ಕ್ರೀಡೆಯ ಜೊತೆ ಸಾಮಾಜಿಕ, ಶೈಕ್ಷಣಿಕವಾಗಿಯೂ ಸಂಘಟನೆಯ ಕಾರ್ಯಚಟುವಟಿಕೆ ವಿಸ್ತರಿಸುವ ಜೊತೆ ನೊಂದಿರುವ ಕುಟುಂಬದವರಿಗೆ ನೆರವಾಗುವಂತೆ ಸಲಹೆ ನೀಡಿದರು.
ಕ್ರೀಡಾಂಗಣ ಉದ್ಘಾಟಿಸಿದ ಅಭಿಮಾನ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಮಾಲಕರಾದ ಸಂದೀಪ ಪೂಜಾರಿ ಮಾತನಾಡಿ ಒಂದು ಸಂಘಟನೆ ಹುಟ್ಟು ಹಾಕುವುದು ಸುಲಭವಲ್ಲ. ಯುವಕರು ಒಗ್ಗೂಡಿ ರಚಿಸ ಮಹಾಸತಿ ಗೆಳೆಯರ ಬಳಗವು ಕ್ರೀಡೆ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮದ ಮೂಲಕ ಈ ಭಾಗದಲ್ಲಿ ಶಾಶ್ವತವಾಗಿ ನೆಲೆಯೂರಲಿ ಎಂದು ಶುಭಹಾರೈಸಿದರು.
ಟ್ರೋಪಿ ಅನಾವರಣಗೊಳಿಸಿದ ಮುಗ್ವಾ ಗ್ರಾ.ಪಂ.ಸದಸ್ಯ ಐ.ವಿ.ನಾಯ್ಕ ಮಾತನಾಡಿ ಕ್ರೀಡೆಯು ಮಾನಸಿಕ ಹಾಗೂ ದೈಹಿಕವಾಗಿ ಸದೃಡಗೊಳಿಸಲಿದೆ. ಗ್ರಾಮೀಣ ಭಾಗದ ಅನೇಕ ಪ್ರತಿಭೆಗಳಿಗೆ ಅವಕಾಶ ದೊರೆತು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಲು ಸಹಕಾರಿಯಾಗಲಿದೆ. ಪ್ರತಿಯೊರ್ವರು ದಿನದ ಕೆಲ ಸಮಯ ಕ್ರೀಡೆ ಅಥವಾ ವ್ಯಾಯಮದಲ್ಲಿ ತೊಡಗಿದರೆ ಉತ್ತಮ ಆರೊಗ್ಯ ಕಾಯ್ದುಕೊಳ್ಳಬಹುದು ಎಂದು ಸಲಹೆ ನೀಡಿದರು.
ಕಿಸಾನ್ ಕಾಂಗ್ರೇಸ್ ಅಧ್ಯಕ್ಷ ಶಿವಾನಂದ ಹೆಗಡೆ, ಯುವ ಮುಖಂಡರಾದ ರವಿ ನಾಯ್ಕ, ನಿತ್ಯಾ ನಾಯ್ಕ, ಸಂಘಟನೆಯ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಕ್ರಿಕೆಟ್ ಪಂದ್ಯಾವಳಿ ನೆರವೇರಿತು.