ಹಳಿಯಾಳ: ಶುಕ್ರವಾರ ನಡೆದ ಹಳಿಯಾಳ ಬಂದ್ ದುರುದ್ದೇಶ ಪೂರಿತವಾಗಿದ್ದು, ಚುನಾವಣೆಯ ಹೊಸ್ತಿಲಲ್ಲಿ ಸಮಾಜದ ಸಾಮರಸ್ಯ, ಪ್ರೀತಿ ಬಾಂಧವ್ಯ ಹಾಳುಗೆಡವಿ ಒಡಕನ್ನು ಸೃಷ್ಟಿಸಿ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬನ್ನಿ ಮಂಟಪದ ಹತ್ತಿರ ನಡೆಯತ್ತಿದ್ದ ಕಾಮಗಾರಿಗೆ ಬಿಜೆಪಿ ಪಕ್ಷದವರೇ ಆದ ಪುರಸಭೆ ಸದಸ್ಯರಾದ ಸಂತೋಷ ಘಟಕಾಂಬಳೆಯವರೇ ಪೂಜೆ ಸಲ್ಲಿಸಿ ಕಾರ್ಯಕ್ರಮ ಪ್ರಾರಂಭಿಸಿದ್ದು ಗ್ರಾಮದೇವಿ ಟ್ರಸ್ಟ್ ನ ಸಭೆಯಲ್ಲಿ ಸರಿಯಾಗಿ ವಿಷಯ ತಿಳಿಸದೇ ಏಕಾಏಕಿಯಾಗಿ ಜನರೆಲ್ಲ ಒಟ್ಟುಗೂಡಿಸಿ ಧಿಡಿರ್ ಬಂದ್ ಘೋಷಿಸುವ ಔಚಿತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದರು.
ಇದಲ್ಲದೇ ಬಂದ್ ವೇಳೆಯಲ್ಲಿ ಕೋಮುಗಲಭೆಗೆ ಪ್ರಚೋದಿಸಿ ಸಮಾಜದ ಸ್ವಾಸ್ಥ್ಯ ಹಾಳುಗೆಡುವಲು ಬಿಜೆಪಿ ಸರಕಾರ ಅಧಿಕಾರಿ ವರ್ಗದವರನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಆಪಾದಿಸಿದರು. ಘಟನಾ ಸ್ಥಳದಲ್ಲಿದ್ದ ಪೋಲೀಸರು ಯಾವುದೇ ಕಟ್ಟು ನಿಟ್ಟಿನ ಕ್ರಮಕೈಗೊಳ್ಳದೇ ಮೂಕ ಪ್ರೇಕ್ಷಕರಾಗಿದ್ದುದು ಬಿಜೆಪಿ ಆಡಳಿತದಲ್ಲಿರುವ ಕೊರತೆ ಮತ್ತು ಅಧಿಕಾರದ ದುರುಪಯೋಗ ಎದ್ದು ಕಾಣುತ್ತಿದೆ. ನಾನು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದು ಬಿಜೆಪಿ ಪಕ್ಷದವರಿಗೆ ಚುನಾವಣೆಗಾಗಿ ಯಾವುದೇ ವಿಷಯ ಮತ್ತು ವಿರೋಧಕ್ಕೆ ಕಾರಣವಿಲ್ಲದೇ ಇಂತಹ ತಪ್ಪು ಕಾರ್ಯಕ್ಕೆ ಕೈ ಹಾಕಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿದ್ದ ಇತರ ಸದಸ್ಯರೂ ಕೂಡ ಘಟನೆಗೆ ವಿರೋಧ ವ್ಯಕ್ತ ಪಡಿಸಿ ಸಾಮಾನ್ಯ ಸಭೆಯಲ್ಲಿ ಕಾಮಗಾರಿ ನಿಲ್ಲಿಸಲು ನಿರ್ಧರಿಸಿದ್ದನ್ನು ಪುನರುಚ್ಚರಿಸಿ ಕಳಕಳಿಯಿಂದ ಕೇಳಿಕೊಂಡರೂ ಹಠಕ್ಕೆ ಬಿದ್ದವರಂತೆ ಟ್ರಸ್ಟ್ ಕಮಿಟಿಯ ಸದಸ್ಯರು ಮತ್ತು ಬಿಜೆಪಿ ಬೆಂಬಲಿತ ಪುರಸಭೆಯ ಸದಸ್ಯರು ವರ್ತಿಸಿ ಹಳಿಯಾಳಕ್ಕೆ ಕಪ್ಪು ಚುಕ್ಕೆ ಇಡಲು ಪ್ರಯತ್ನಿಸಿದ್ದಾರೆ ಎಂದರು.
ಪೇವರ್ಸ್ ತೆಗೆದ ಬನ್ನಿ ಮುರಿಯುವ ಸ್ಥಳದಲ್ಲಿ ಸ್ಥಾಪಿಸಿದ ಧ್ವಜ ಯಾವುದು? ಗ್ರಾಮದೇವಿಗೆ ಸಂಬಂಧಿಸಿದ ಧ್ವಜವೇ ? ಧ್ವಜ ಸ್ಥಾಪಿಸುವ ಮೂಲಕ ತಮ್ಮ ದುರುದ್ದೇಶದಿಂದ ಕೂಡಿರುವ ಪ್ರತಿಭಟನೆಯ ಅಜೆಂಡಾ ಬಹಿರಂಗಗೊಂಡಿದೆ ಎಂದು ದೇಶಪಾಂಡೆ ಹೆಳಿದರು. ಘಟನೆಗೆ ಸಂಬಂಧಿಸಿ ದುಡುಕಿ ಊರಿನ ಘನತೆ ಗೌರವಗಳನ್ನು ಗಾಳಿಗೆ ತೂರಿ ಮನಸೋ ಇಚ್ಚೆ ನಡೆದು ಕೊಂಡಿರುವ ಅಹಿತಕರ ಘಟನೆಯನ್ನು ಸಾರಾಸಗಟ ಖಂಡಿಸಿ ನಡೆದ ಅವಘಡಕ್ಕೆ ಒಬ್ಬ ಶಾಸಕನಾಗಿ ಜವಾಬ್ದಾರಿಯಿಂದ ಜನತೆಯಲ್ಲಿ ಆಡಳಿತ ವರ್ಗದವರ ಪರವಾಗಿ ಮತ್ತು ವೈಯುಕ್ತಿಕವಾಗಿ ಕೈಮುಗಿದು ಕ್ಷಮೆ ಯಾಚಿಸುತ್ತೇನೆ ಮತ್ತು ಜನತೆ ಸಂಯಮ ಕಳೆದುಕೊಳ್ಳದೇ ಕಾನೂನು ಕೈಗೆತ್ತಿಕೊಳ್ಳದೇ ಶಾಂತರೀತಿಯಿಂದ ಇರಬೇಕೆಂದು ಮನವಿ ಮಾಡಿದರು ಮತ್ತು ಇಂತಹ ಯಾವುದೇ ಕಾಮಗಾರಿಗಳಿದ್ದಲ್ಲಿ ತಕ್ಷಣವೇ ನಿಲ್ಲಿಸಬೇಕು ಎಂದು ಆದೇಶಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭೆಯ ಉಪಾಧ್ಯಕ್ಷೆ ಸುವರ್ಣ ಮಾದಾರ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಕೃಷ್ಣಾ ಪಾಟೀಲ, ಕೆಪಿಸಿಸಿ ಸದಸ್ಯರಾದ ಸುಭಾಸ ಕೊರ್ವೇಕರ, ಪುರಸಭೆ ಸದಸ್ಯರಾದ ಸುರೇಶ ವಗ್ರಾಯಿ, ಶಂಕರ ಬೆಳಗಾಂವಕರ, ಅನಿಲ ಚವ್ಹಾಣ, ಮಾಜಿ ಪುರಸಭೆ ಅಧ್ಯಕ್ಷ ಉಮೇಶ ಬೋಳಶೆಟ್ಟಿ ಉಪಸ್ಥಿತರಿದ್ದರು.