ಶಿರಸಿ: ತಾಲೂಕಿನ ಇಸಳೂರಿನ ಸರಕಾರಿ ಪ್ರೌಢಶಾಲೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕದ ವಾರ್ಷಿಕ ಶಿಬಿರವನ್ನು ಚಿಪಗಿಯ ಶಾಲ್ಮಲಾ ಉದ್ಯಾನವನದಲ್ಲಿ ಫೆ.11ರಂದು ಹಮ್ಮಿಕೊಳ್ಳಲಾಗಿತ್ತು.
ಪರಿಸರ ಪ್ರಜ್ಞೆ ಮೂಡಿಸುವ ಉದ್ದೇಶವನ್ನಿಟ್ಟುಕೊಂಡು ಹಮ್ಮಿಕೊಂಡ ಶಿಬಿರದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮಾಲತೇಶ ಬಾರ್ಕಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ಅರಣ್ಯ ಸಂರಕ್ಷಣೆ, ಮರಗಳ ಮಾಹಿತಿ, ಪಕ್ಷಿ, ಪ್ರಾಣಿ, ಸರಿಸೃಪಗಳಿಂದ ಮಾನವನಿಗೆ ಉಪಯೋಗಗಳು, ಕಾಡಿನ ಮಹತ್ವ, ವಿಧಗಳು, ಮಣ್ಣಿನ ವಿಧಗಳು, ಅರಣ್ಯ ಸಿಬ್ಬಂದಿಗಳ ಕರ್ತವ್ಯಗಳು, ಕಡತಗಳ ಬಗ್ಗೆ ಸವಿಸ್ತಾರವಾಗಿ ಮನ ಮುಟ್ಟುವಂತೆ ವಿವರಣೆ ನೀಡಿದರು.
ವಲಯ ಅರಣ್ಯಾಧಿಕಾರಿ ಶಿವಾನಂದ ಹಾಗೂ ಸಿಬ್ಬಂದಿ ವರ್ಗಗಳ ಸಹಯೋಗದಲ್ಲಿ ಶಿಬಿರ ಯಶಸ್ವಿಗೊಂಡು ಶಿಬಿರಾರ್ಥಿಗಳಿಂದ ಒಂದು ಗಂಟೆಯ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು. ಅವಕಾಶ ಕಲ್ಪಿಸಿದ ಅರಣ್ಯ ಇಲಾಖೆಗೆ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕವೃಂದದ ಪರವಾಗಿ ಕಾರ್ಯಕ್ರಮಾಧಿಕಾರಿ ಬಿ.ವಿ. ಗಣೇಶ ಕೃತಜ್ಞತೆ ಸಲ್ಲಿಸಿದರು.