• Slide
  Slide
  Slide
  previous arrow
  next arrow
 • ಅಧಃಪತನದಿಂದ ಮೇಲೇಳಲು ದೇವರ‌‌ ಆಶೀರ್ವಾದ ಅಗತ್ಯ: ರಾಘವೇಶ್ವರ ಶ್ರೀ

  300x250 AD

  ಸಿದ್ದಾಪುರ: ದೇವರಿಗೆ ನಾವು ಏನು ಮಾಡುತ್ತೇವೋ ಅದು ನಮಗೇ ಕೊಡುವಂಥದ್ದು. ಅದು ಆರತಿಯಾಗಿರಲಿ, ಅಲಂಕಾರವಾಗಿರಲಿ. ದೇವರನ್ನು ಶುದ್ಧಗೊಳಿಸಿದರೆ ನಾವೂ ಶುದ್ಧಗೊಳ್ಳುತ್ತೇವೆ ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.
  ಅವರು ತಾಲೂಕಿನ ಕೊಳಗಿಯ ಸಪರಿವಾರ ಶ್ರೀಜನಾರ್ಧನ ದೇವರ ಪ್ರತಿಷ್ಠಾಪನಾ ಸಮಾರಂಭದಲ್ಲಿ ದೇವತಾ ಪ್ರತಿಷ್ಠೆ, ಶಿಖರ ಕಲಶ ಪ್ರತಿಷ್ಠೆ ನೆರವೇರಿಸಿ ಆಶೀರ್ವಚನ ನೀಡಿದರು.
  ಜೀವನದಲ್ಲಿನ ಅಧ:ಪತನದಿಂದ ಮೇಲೆದ್ದು ಬರಬೇಕು. ಕೆಳಗಿನಿಂದ ಸಮಸ್ಥಿತಿಗೆ ತಲುಪಿ ಶಿಖರವನ್ನು ತಲುಪಬೇಕು. ಅದಕ್ಕೆ ದೇವರ ಆಶೀರ್ವಾದ ಅಗತ್ಯ. ಯಾವುದೇ ಊರಿನಲ್ಲಿ ದೇವಾಲಯ ಪಾಳುಬಿದ್ದರೆ  ಅದು ನಮಗೆ ಕಳಂಕ. ದೇವರು ನಮಗೆ ಕರ್ತವ್ಯವನ್ನು ಜ್ಞಾಪಿಸುತ್ತಾನೆ. ಅವು ಕೊಡುವ ಸೂಚನೆಗಳನ್ನು ಅರ್ಥಮಾಡಿಕೊಂಡು ಮುಂದುವರಿಯಬೇಕು. ಗುರುಸೇವೆ ಬರುವ ತೊಂದರೆಗಳಿಗೆ ತಡೆಯೊಡ್ಡುತ್ತದೆ. ದೇವತಾ ಶಕ್ತಿಗಳು ಸುಸ್ಥಿತಿಯಲ್ಲಿಲ್ಲದಿದ್ದರೆ ಬರುವ ತೊಂದರೆಗಳಿಗೆ ತಡೆಯಿಲ್ಲ. ಶ್ರೀ ದೇವರ ಪ್ರತಿಷ್ಠಾಪನೆಯಂಥ ಉತ್ತಮ ಕಾರ್ಯದ ಮೂಲಕ ಹೊಸ ಮಾರ್ಗ ಇಂದು ಆರಂಭವಾಗಿದೆ. ನೇತೃತ್ವ ವಹಿಸಿದ ವೆಂಕಟರಮಣ ಹೆಗಡೆ ಕುಟುಂಬದವರಿಗೂ, ಎಲ್ಲ ರೀತಿಯ ಸಹಕಾರ ನೀಡಿದ ಊರಿನವರಿಗೂ ಎಲ್ಲ ರೀತಿಯಲ್ಲೂ ಒಳಿತಾಗುತ್ತದೆ ಎಂದು ಶ್ರೀಗಳು ಹರಸಿದರು.
  ನೇತೃತ್ವವಹಿಸಿದ ವೆಂಕಟರಮಣ ಹೆಗಡೆ ದಂಪತಿಗಳು ಶ್ರೀಗಳಿಗೆ ಪಾದಪೂಜೆ, ಫಲಸಮರ್ಪಣೆ ನಡೆಸಿದರು. ವೇ.ಪ್ರಕಾಶ ಭಟ್ ತಂಡದವರು ವೇದಘೋಷ ಮಾಡಿದರು. ಹರ್ಷ ಭಟ್ಟ ಗುಂಜಗೋಡ ಪ್ರಾಸ್ತಾವಿಕ ಮಾತುಗಳನ್ನಾಡಿದರು.
  ಈ ಸಂದರ್ಭದಲ್ಲಿ ನವಗ್ರಹಶಾಂತಿ, ಜೀವಕುಂಭಾಭಿಷೇಕ, ಪ್ರತಿಷ್ಠಾಂಗಹವನ, ತತ್ವಕಲಾಹವನ ಮುಂತಾದ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಪ್ರಸಾದಭೋಜನ ನಡೆಯಿತು. ರಾತ್ರಿ ಭಕ್ತಸುಧನ್ವ ಯಕ್ಷಗಾನ ಪ್ರದರ್ಶನಗೊಂಡಿತು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top