ಸಿದ್ದಾಪುರ: ಕ್ಷೇತ್ರದ ಸಾರ್ವಜನಿಕರು ಸಮಸ್ಯೆಯನ್ನು ಮುದ್ದಿಟ್ಟುಕೊಂಡು ಬಿಜೆಪಿಯ ಜನವಿರೋಧಿ ನೀತಿಯನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಿದ್ದಾಪುರದಿಂದ- ಶಿರಸಿಯವರೆಗೆ ಪಾದಯಾತ್ರೆಯನ್ನು ನಡೆಸಲಾಯಿತು.
ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಭೀಮಣ್ಣ ಟಿ.ನಾಯ್ಕ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಬಿಜೆಪಿ ಚುನಾವಣೆಯ ಸಮಯದಲ್ಲಿ ಜನರಿಗೆ ಜನಪರವಾದ ಆಡಳಿತ ನೀಡುವುದಾಗಿ ಕೊಟ್ಟಿರುವ ಭರವಸೆಯನ್ನು ನಡೆಸಿಕೊಟ್ಟಿಲ್ಲ. ಶೇ 40 ಸರ್ಕಾರವಾಗಿದೆ. ಇದರಲ್ಲಿ ಯಾವುದೆ ಬಡವರ ಪರವಾಗಿ, ರೈತರ ಪರವಾಗಿ ಇಲ್ಲ ಎನ್ನುವುದನ್ನು ನಾವು ಕೇಳಿದ್ದೇವೆ. ರೈತರಿಗೆ ಅನೇಕ ವಿಚಾರವಾಗಿ ತೊಂದರೆಯನ್ನು ನೀಡುತ್ತಿರುವ ಬಿಜೆಪಿ ಸರ್ಕಾರ ಯಾಕೆ ಬೇಕು ಎನ್ನುವಂತೆ ಆಗಿದೆ ಎಂದರು.
ಕೆ.ಪಿ.ಸಿ.ಸಿ ಶಿಸ್ತು ಸಮಿತಿಯ ಸಂಚಾಲಕರಾದ ನಿವೇದಿತ್ ಆಳ್ವಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮೊದಲಾದವರು ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ವಿ.ಎನ್.ನಾಯ್ಕ ಬೇಡ್ಕಣಿ, ನಾಸೀರ್ ಖಾನ್, ಸತೀಶ ಪಿ.ನಾಯ್ಕ, ಸಾವೇರ್ ಡಿಸೀಲ್ವಾ, ಸೀಮಾ ಹೆಗಡೆ, ಬಿ.ಜಟ್ಟಪ್ಪ ಮೊಗೇರ, ಜಯರಾಮ ನಾಯ್ಕ, ರಾಜೇಶ ನಾಯ್ಕ ಕತ್ತಿ, ಪ್ರಶಾಂತ ನಾಯ್ಕ ಹೊಸೂರು, ಜಿ.ಟಿ.ನಾಯ್ಕ ಗೋಳಗೋಡ, ಇಂದಿರಾ ಜಿ.ನಾಯ್ಕ, ಸುಮಂಗಲಾ ವಸಂತ ನಾಯ್ಕ, ಸುನೀಲ್ ಫರ್ನಾಂಡಿಸ್, ಕೆ.ಟಿ. ಹೊನ್ನೆಗುಂಡಿ ಮೊದಲಾದವರು ಇದ್ದರು.
ಪಾದಯಾತ್ರೆಯ ಬೇಡಿಕೆಗಳು
ಕ್ಷೇತ್ರದಲ್ಲಿ ಅತಿಕ್ರಮಣದಾರರ ಸಮಸ್ಯೆಯಿದ್ದು ಸರ್ಕಾರ ತಕ್ಷಣ ಅತಿಕ್ರಮಣದಾರರಿಗೆ ಅಧಿಕಾರಿಗಳ ಕಿರುಕುಳ ತಪ್ಪಿಸಿ ಪಟ್ಟಾ ನೀಡಿ ಸಮಸ್ಯೆ ಬಗೆಹರಿಸಬೇಕು. ರೈತರ ಪಹಣಿ ಪತ್ರಿಕೆಯಲ್ಲಿರುವ ಕರ್ನಾಟಕ ಸರ್ಕಾರ ಅಂತ ಇರುವುದನ್ನು ಕಡಿಮೆಮಾಡಿ ರೈತರ ಹೆಸರನ್ನು ದಾಖಲಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ರೈತರ ಸಾಲಮನ್ನಾ ಮತ್ತು ಬೆಳೆ ವಿಮೆಯನ್ನು ನೀಡುವ ಕುರಿತು ಆಗ್ರಹ, ಕ್ಷೇತ್ರಾದ್ಯಂತ ನಡೆಯುತ್ತಿರುವ ಅಕ್ರಮ ಮಧ್ಯ ಮಾರಾಟವನ್ನು ನಿಷೇಧಿಸುವಂತೆ ಆಗ್ರಹ , ಕ್ಷೇತ್ರ ವ್ಯಾಪ್ತಿಯಲ್ಲಿ ಬಿ.ಜೆ.ಪಿ. ಸರ್ಕಾರ ಈ ಹಿಂದೆ ಜಾರಿಗೊಳಿಸಿರುವ ಇ-ಸ್ವತ್ತು ನಿಂದ ಜನರಿಗೆ ಆಗುತ್ತಿರುವ ಸಮಸ್ಯೆಯನ್ನು ನಿವಾರಿಸುವ ಕುರಿತು. ಕ್ಷೇತ್ರದ ಕಂದಾಯ ಇಲಾಖೆಯಲ್ಲಿ ಸರ್ವೇ, ಮರಣ ದಾಖಲೆ ಮತ್ತು ಜಾತಿ ಆದಾಯ ಪ್ರಮಾಣ ಪತ್ರ ಸಕಾಲದಲ್ಲಿ ಸಿಗದೇ ಇರುವುದರ ಕುರಿತು. ಪ್ರಾಥಮಿಕ, ಪ್ರೌಢಶಾಲೆ ಮತ್ತು ಅಂಗನವಾಡಿ ಕಟ್ಟಡಗಳು ಮತ್ತು ಶೌಚಾಲಯಗಳು ವ್ಯವಸ್ಥಿತ ರೀತಿಯಲ್ಲಿ ಇಲ್ಲದಿರುವ ಕುರಿತು. ಕ್ಷೇತ್ರದ ಆರೋಗ್ಯ ಇಲಾಖೆಯ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದೇ ಇರುವ ಕುರಿತು, ಕ್ಷೇತ್ರದ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಅರ್ಧಕ್ಕಿಂತ ಕಡಿಮೆ ಸಿಬ್ಬಂದಿಗಳಿದ್ದು ಸಿಬ್ಬಂದಿಗಳನ್ನು ಭರ್ತಿಮಾಡುವ ಕುರಿತು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸರಿಯಾದ ರಸ್ತೆಗಳು ಇಲ್ಲದೇ ಇರುವ ಕುರಿತು. ಗ್ರಾಮ ಪಂಚಾಯಿತಿಗಳಿಗೆ ಕಳೆದ 3 ವರ್ಷಗಳಿಂದ ವಸತಿ ಯೋಜನೆಯ ಮನೆಗಳು ಮಂಜೂರಾಗಿ ನಿರ್ಮಾಣಗೊಳ್ಳದ ಕುರಿತು. ಸಾರಿಗೆ ಇಲಾಖೆಯಿಂದ ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸುವ ಕುರಿತು. ಗ್ರಾಮ ಪಂಚಾಯತಿಗಳಲ್ಲಿರುವ ವಾಟರ್‌ಮೆನ್ ಗಳಿಗೆ ವೇತನ ನೀಡದೆ ಇರುವ ಕುರಿತು. ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಸಿಬ್ಬಂದಿಗಳಿಗೆ ಮತ್ತು ಸರ್ಕಾರಿ ಹಾಸ್ಟೆಲ್ ಸಿಬ್ಬಂದಿಗಳಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಿ ಬೇಡಿಕೆ ಈಡೇರಿಸುವ ಕುರಿತು. ತಾಳಗುಪ್ಪಾ ಸಿದ್ದಾಪುರ -ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣ ಕುರಿತು ಆಗ್ರಹ. ನ್ಯಾಯಬೆಲೆ ಅಂಗಡಿಗಳಲ್ಲಿ ಸೀಮೆಎಣ್ಣೆ ಮತ್ತು ದಿನ ಬಳಕೆಯ ವಸ್ತುಗಳನ್ನು ವಿತರಿಸುವ ಕುರಿತು ಆಗ್ರಹ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಅಕ್ಕಿ-ಬೇಳೆಯನ್ನು ವಿತರಿಸುವ ಕುರಿತು, ನಗರ ವ್ಯಾಪ್ತಿಯ ನಿವಾಸಿಗಳಿಗೆ ಫಾರ್ಮ್ ನಂ.3ರಲ್ಲಿ ಅರ್ಜಿ ಸಲ್ಲಿಸಲು ಮತ್ತು ಮನೆಯನ್ನು ನಿರ್ಮಿಸಲು ಅವಕಾಶ ಕಲ್ಪಿಸಿಕೊಡುವ ಕುರಿತು.ಎಲ್ಲಾ ಅಂಗವಿಕಲರಿಗೆ ಸಮಾನ ಪಿಂಚಣಿ ನೀಡುವಂತೆ ನಿಯದು ರೂಪಿಸುವ ಕುರಿತು, ಹಳ್ಳಿಗಳ ಮಧ್ಯರಸ್ತೆಯಲ್ಲಿರುವ ಹೆಸ್ಕಾಂ ಇಲಾಖೆಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ಸಮರ್ಪಕ ರೀತಿಯಲ್ಲಿ ನಿರ್ವಹಣೆ ಕೈಗೊಳ್ಳುವ ಕುರಿತು ಪಾದಯಾತ್ರೆಯಲ್ಲಿ ಆಗ್ರಹಿಸಲಾಗಿದೆ.