ಕಾರವಾರ: ಶಿರವಾಡದ ನಿರಾಶ್ರಿತರ ಜಾಗ ಹಾಗೂ ಅರಣ್ಯ ಭೂಮಿಯಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಿಗೆ ಪುನರ್ವಸತಿಗಾಗಿ ಜಾಗ ಕಾಯ್ದಿರಿಸುವ ವ್ಯವಸ್ಥೆ ಮಾಡುವಂತೆ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಲಿಷಾ ಜಿ.ಯಲಕಪಾಟಿ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈಗಾಗಲೇ ಸುಮಾರು 35ರಿಂದ 40 ವರ್ಷಗಳಿಂದ ಶಿರವಾಡ ವ್ಯಾಪ್ತಿಯ ನಿರಾಶ್ರಿತರ ಹಾಗೂ ಅರಣ್ಯ ಭೂಮಿ (ಕೊಂಕಣ ರೇಲ್ವೆಗೆ ತೆಗೆದಿಟ್ಟಿರುವ ಭೂಮಿ)ಯಲ್ಲಿ ಸುಮಾರು 200 ಕುಟುಂಬಗಳು ವಾಸ ಮಾಡುತ್ತಿವೆ. ಬಂದರು ವಿಸ್ತರಣೆ ಯೋಜನೆಗಾಗಿ ನಿರಾಶ್ರಿತವಾಗುವ ಬೈತ್‌ಖೋಲ್ ನಿವಾಸಿಗಳನ್ನು ಶಿರವಾಡದಲ್ಲಿ ಕಾಯ್ದಿಟ್ಟಿರುವ ಪ್ರದೇಶಕ್ಕೆ ಸ್ಥಳಾಂತರಿಸಿದರೆ, ರೇಲ್ವೆ ಯೋಜನೆಗೆ ಕಾಯ್ದಿರಿಸಿರುವ ಜಾಗವೆಂದು ಶಿರವಾಡದ ನಿವಾಸಿಗಳನ್ನು ಕೂಡ ಒಕ್ಕಲೆಬ್ಬಿಸಿದರೆ ಅರಣ್ಯ ಭೂಮಿಯಲ್ಲಿ ವಾಸಿಸುತ್ತಿರುವ ಕುಟುಂಬಗಳೂ ಸಹ ನಿರಾಶ್ರಿತರಾಗುವ ಭೀತಿ ಎದುರಾಗಿದೆ. ಆದ್ದರಿಂದ ಶಿರವಾಡದ ನಿರಾಶ್ರಿತರ ಜಾಗದಲ್ಲಿ ಹಾಗೂ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಪ್ರತ್ಯೇಕ ಪುನರ್ವಸತಿ ಯೋಜನೆ ಅಡಿಯಲ್ಲಿ ಯಾವುದಾದರೂ ಬೇರೆ ಪ್ರದೇಶದಲ್ಲಿ ಜಾಗ ಮಂಜೂರಾತಿ ಮಾಡಿಕೊಡಬೇಕಾಗಿ ವಿನಂತಿಸಿಕೊOಡಿದ್ದಾರೆ.
ಈ ಸಂದರ್ಭದಲ್ಲಿ ಶಿರವಾಡ ಗ್ರಾಮಸ್ಥರಾದ ಶಂಕರ ವಡ್ಡರ, ಗೋಪಾಲ ಬೋಯರ್, ನೂರುಲ್ಲಾ ಶೇಖ್, ಗಣೇಶ ದೇಶನೂರ, ಸುರೇಶ ನಾಯ್ಕ ಹಾಗೂ ಮುಂತಾದವರು ಹಾಜರಿದ್ದರು.