ಕುಮಟಾ: ಪ್ರವಾಹ ಭೀತಿಗೋ ಅಥವಾ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ನಿಮ್ಮ ಕನಸಿನ ಮನೆ ನುಚ್ಚುನೂರಾಗುವ ಆತಂಕ ಎದುರಾದರೆ ನಿಮ್ಮ ಅಂದದ ಮನೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಅಥವಾ ಲಿಫ್ಟ್ ಮಾಡುವ ತಂತ್ರಜ್ಞಾನ ಬೆಳೆದಿದೆ. ಕಡೇಕೋಡಿಯಲ್ಲಿ ಸಾವಿರ ಚದರ ಮೀಟರ್ ವಿಸ್ತೀರ್ಣದ ಮನೆಯೊಂದನ್ನು 6 ಅಡಿ ಎತ್ತರಕ್ಕೆ ಏರಿಸುವ ಕಾಮಗಾರಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಹರಿಯಾಣ ಮೂಲದ ಎಚ್.ಎಸ್.ಬಿ.ಎಸ್ ಬಿಲ್ಡಿಂಗ್ ಸೊಲ್ಯೂಶನ್ ಎಂಬ ಖಾಸಗಿ ಕಂಪನಿಯು ನೆಲಮಟ್ಟದಲ್ಲಿರುವ ಮನೆ ಅಥವಾ ಕಟ್ಟಡವನ್ನು ಬೇಡಿಕೆಗೆ ಅನುಗುಣವಾಗಿ ಸುರಕ್ಷಿತವಾಗಿ ಸ್ಥಳಾಂತರಿಸುವ ಅಥವಾ ಸಂಪೂರ್ಣ ಕಟ್ಟಡವನ್ನು ನೆಲಮಟ್ಟದಿಂದ ಎತ್ತರಿಸಬಹುದಾದ ಕಾಮಗಾರಿ ಮಾಡುತ್ತಿದೆ. ಅಂತದ್ದೊoದು ಸಾಹಸಮಯ ಕಾರ್ಯಾಚರಣೆ ತಾಲೂಕಿನ ಕಡೆಕೋಡಿ ಬಳಿ ನಡೆದಿದೆ. ಮನೆಯೊಂದನ್ನು ನೆಲಮಟ್ಟಕ್ಕಿಂತ 6 ಅಡಿ ಎತ್ತರಕ್ಕೆ ಏರಿಸಿ ನಿಲ್ಲಿಸುವ ಮೂಲಕ ಗಮನ ಸೆಳೆದಿದೆ. ಸುಮಾರು 1 ಸಾವಿರ ಸ್ಕ್ವೇರ್ ಫೂಟ್ ಇರುವ ಆರ್.ಸಿ.ಸಿ ಮನೆಯ ಅಡಿಪಾಯದಲ್ಲಿರುವ ಕಲ್ಲುಗಳನ್ನು ತೆಗೆದು ಆ ಜಾಗದಲ್ಲಿ ಭಾರ ಎತ್ತುವ ಜ್ಯಾಕ್‌ಗಳನ್ನು ಬಳಸಿ ಸಂಪೂರ್ಣ ಮನೆಯನ್ನು ಸುಮಾರು 6 ಅಡಿಗೆ ಎತ್ತರಿಸಲಾಗುತ್ತಿದೆ. ಬಳಿಕ ಅಡಿಪಾಯಕ್ಕೆ ಮತ್ತೆ ಕಲ್ಲನ್ನು ಅಳವಡಿಸಿ, ಪ್ಲಾಸ್ಟರ್ ಮಾಡಲಾಗುತ್ತದೆ.
ಹೇಮಂತ ಪಾಯ್ದೆ ಮಾಲೀಕತ್ವದ ಹಳೆ ಮನೆಯನ್ನು ಪಿಲ್ಲರ್ ಬಳಸದೆ ಚಿರೇಕಲ್ಲಿನ ನೆಲಗಟ್ಟಿನ ಮೇಲೆ ಆರ್‌ಸಿಸಿ ಮನೆ ನಿರ್ಮಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲೆ ಮನೆ ಇದ್ದ ಕಾರಣ ಚತುಷ್ಪಥ ನಿರ್ಮಾಣವಾದ ಮೇಲೆ ಮನೆ ತಗ್ಗಿಹೋಗಿದೆ. ಇದರಿಂದ ಮಳೆಗಾಲದಲ್ಲಿ ಮನೆಗೆ ನೀರು ನುಗ್ಗಿ ತೀರಾ ಸಮಸ್ಯೆಯಾಗಿದೆ. ಮನೆಯನ್ನು ಸುರಕ್ಷಿತವಾಗಿ ಮೇಲಕ್ಕೆ ಏರಿಸುವ ಮತ್ತು ಸ್ಥಳಾಂತರಿಸುವ ಬಗ್ಗೆ ಜಾಹೀರಾತು ವೀಕ್ಷಿಸಿದ ಮನೆ ಮಾಲೀಕರು ಎಚ್.ಎಸ್.ಬಿ.ಎಸ್ ಬಿಲ್ಡಿಂಗ್ ಸೊಲ್ಯೂಶನ್ ಕಂಪನಿಯನ್ನು ಸಂಪರ್ಕಿಸಿ, ತಮ್ಮ ಬೇಡಿಕೆ ಸಲ್ಲಿಸಿದರು. ಅದರಂತೆ ಕುಮಟಾಕ್ಕೆ ಆಗಮಿಸಿದ ಕಂಪನಿಯ ತಂತ್ರಜ್ಞರ ತಂಡ ತಮ್ಮ ವಿಶೇಷ ತಂತ್ರಜ್ಞಾನದ ಬಗ್ಗೆ ಅವರಿಗೆ ಮಾಹಿತಿ ನೀಡಿ, ನಿಮ್ಮ ಮನೆಯನ್ನು ಸುರಕ್ಷಿತವಾಗಿ 6 ಅಡಿಗೆ ಎತ್ತರಿಸಿಕೊಡುವ ಭರವಸೆ ನೀಡಿದರು. ಅದರಂತೆ ಈಗ ಮನೆಯನ್ನು ಸುರಕ್ಷಿತವಾಗಿ 6 ಅಡಿಗೆ ಎತ್ತರಿಸುವ ಕಾರ್ಯಾಚರಣೆ ಸಾಗಿದೆ. ಈ ಕಾಮಗಾರಿ ನೋಡಿ ಎಲ್ಲರೂ ಅಚ್ಚರಿ ಪಟ್ಟುಕೊಳ್ಳುವಂತಾಗಿದೆ.
ಹೊಸ ತಂತ್ರಜ್ಞಾನದ ಬಳಕೆ: 6 ಅಡಿ ಮೇಲಕ್ಕೆದ್ದ ಮನೆ
