ಹೊನ್ನಾವರ: ಸರ್ಕಾರದ ಆದೇಶವನ್ನು ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಿ ಸೌಲಭ್ಯಗಳನ್ನ ಜನತೆಗೆ ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ತಾ.ಪಂ. ಆಡಳಿತಾಧಿಕಾರಿ ವಿನೋದ ಅಣ್ವೇಕರ್ ಕಿವಿಮಾತು ಹೇಳಿದರು.
ತಾ.ಪಂ. ಸಭಾಭವನದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಸರ್ಕಾರ ಅನುದಾನ ನೀಡುವ ಕಾಮಗಾರಿಯನ್ನು ಆಯಾ ಇಲಾಖೆಯವರು ಕಾಮಗಾರಿ ನಡೆಯುವಾಗ ಕಳಪೆಯಾಗದಂತೆ ನೋಡಿಕೊಳ್ಳಬೇಕು. ಸರ್ಕಾರಿ ಸೌಲಭ್ಯವು ನೈಜ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸುವಂತೆ ಸಲಹೆ ನೀಡಿದರು.
ಆರೋಗ್ಯ ಇಲಾಖೆಯ ಚರ್ಚೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿ ತಾಲೂಕಿನಲ್ಲಿ 496 ಎಂಡೋಸಲ್ಫಾನ್ ಪೀಡಿತರಿದ್ದಾರೆ. ಸ್ಕೋಡ್‌ವೆಸ್ ಸಂಸ್ಥೆಯು ಇವರ ಆರೋಗ್ಯದ ಮೇಲೆ ನಿಗಾ ವಹಿಸುತ್ತಿದೆ. ಆಯುಷ್ಮಾನ್ ಕಾರ್ಡ್ ನೋಂದಣಿಯನ್ನು ಗ್ರಾಮ ಒನ್ ಕೇಂದ್ರದ ಮೂಲಕ ನೊಂದಾವಣೆ ಮಾಡಲಾಗುತ್ತಿದೆ ಎಂದರು.
ಶಿಕ್ಷಣ ಇಲಾಖೆಯ ಮಾಹಿತಿ ನೀಡಿದ ಸಮನ್ವಯಾಧಿಕಾರಿ ಎಸ್.ಎಂ.ಹೆಗಡೆ, ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬ ಮುಗಿದಿದೆ. ಪ್ರಸಕ್ತ ಸಾಲಿನ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ ನಡೆದಿದೆ. ತಾಲೂಕಿಗೆ 29 ನೂತನ ಕೊಠಡಿ ಮಂಜೂರಾಗಿದೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು 1990 ವಿದ್ಯಾರ್ಥಿಗಳು ಬರೆಯಲಿದ್ದು, ತಾಲೂಕಿನಲ್ಲಿ 9 ಪರೀಕ್ಷಾ ಕೇಂದ್ರ ತೆರೆಯಲಾಗುವುದು ಎಂದರು. ಅಪ್ಸರಕೊಂಡ ಶಾಲೆಯಲ್ಲಿ ಮತಗಟ್ಟೆ ಇದ್ದು, ಶಿಘ್ರ ಕಟ್ಟಡ ಪೂರ್ಣಗೊಳಿಸುವಂತೆ ಇ.ಓ ಸುರೇಶ ನಾಯ್ಕ ಸಂಭದಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ, ಲೋಕೋಪಯೋಗಿ, ಹೆಸ್ಕಾಂ, ಸಮಾಜಕಲ್ಯಾಣ, ಬಂದರು, ಅಕ್ಷರದಾಸೋಹ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾವಾರು ಪ್ರಗತಿಯ ಕುರಿತು ಸಭೆಯ ಗಮನಕ್ಕೆ ತಂದರು.