ಕಾರವಾರ: ಶಿಶು ಜನಿಸುತ್ತಿರುವ ಸಂದರ್ಭದ ಶಿಲ್ಪವಿರುವ ಅಪರೂಪದ ರಣಗಂಬವನ್ನು ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅವರು ತಾಲೂಕಿನ ಅಚವೆ ಗ್ರಾಮ ಪಂಚಾಯತ ವ್ಯಾಪ್ತಿಯ ಮಾಬಗಿಯಲ್ಲಿ ಪತ್ತೆಹಚ್ಚಿದ್ದಾರೆ.
ರಣಗಂಬವೆoದರೆ ಅದೊಂದು ಸ್ಥಂಭ ಮಾದರಿಯ ವೀರಗಲ್ಲು. ದೇವಾಲಯದ ಭಿತ್ತಿಗಳಲ್ಲಿ ಈ ಬಗೆಯ ಶಿಲ್ಪಗಳು ದೊರೆತ ಉದಾಹರಣೆಗಳಿವೆ. ಆದರೆ ವೀರಗಲ್ಲಿನಲ್ಲಿ ಈ ರೀತಿಯ ಶಿಲ್ಪವಿರುವುದು ಈ ಹಿಂದೆ ಪತ್ತೆಯಾದ ವಿವರಗಳಿಲ್ಲ. ಆದ್ದರಿಂದ ಇದೊಂದು ಮಹತ್ವದ ಶೋಧವಾಗಿದೆ ಹಾಗೂ ಇದು ಕರ್ನಾಟಕದಲ್ಲಿ ಈವರೆಗೆ ದೊರೆತ ವೀರಗಲ್ಲುಗಳಲ್ಲಿಯೇ ಅಪರೂಪದ್ದಾಗಿದೆ ಎಂದು ನಾಡಿನ ಹಿರಿಯ ವಿದ್ವಾಂಸರುಗಳು ಅಭಿಪ್ರಾಯಿಸಿ ಗೌಡರನ್ನು ಅಭಿನಂದಿಸಿದ್ದಾರೆ.
ಕಳೆದ ಭಾನುವಾರ ಮಾಬಗಿ ಗ್ರಾಮದಲ್ಲಿ ಕೈಗೊಂಡ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಸಾತು ಗೌಡರ ಜಮೀನಿನಲ್ಲಿ ಈ ರಣಗಂಬ ಪತ್ತೆಯಾಗಿದೆ. ಒಂದು ಅಡಿ ಅಗಲ, ದಪ್ಪ ಮತ್ತು ಏಳು ಅಡಿ ಉದ್ದವಿರುವ ಈ ಸ್ಥಂಭದ ಮೂರು ಮುಖದಲ್ಲಿ ಶಿಲ್ಪಗಳಿದ್ದು, ಒಂದು ಮುಖದಲ್ಲಿ ಏನನ್ನೂ ಚಿತ್ರಿಸದೇ ಖಾಲಿ ಬಿಡಲಾಗಿದೆ. ಬಹುಶಃ ಅಲ್ಲಿ ಶಾಸನ ಬರೆಯಲು ಉದ್ದೇಶಿಸಿ ನಂತರ ಬರೆಯದೇ ಹಾಗೇ ಬಿಟ್ಟಿರಬೇಕು ಎಂದು ಶ್ಯಾಮಸುಂದರ ಅವರು ತಿಳಿಸಿದ್ದಾರೆ.
ಶಿಲ್ಪಗಳಲ್ಲಿ ಯುದ್ಧದ ವಿವಿಧ ರೀತಿಯ ಚಿತ್ರಣಗಳಿವೆ. ಕಾಲಾಳುಗಳ, ಕುದುರೆ ಸವಾರರ ಹಾಗೂ ಗಜಪಡೆಗಳ ಯುದ್ಧ ಚಿತ್ರಣಗಳನ್ನು ಪ್ರತ್ಯೇಕವಾಗಿ ತೋರಿಸಲಾಗಿದೆ. ಆಯಾ ಪ್ರಕಾರದ ಯುದ್ಧಗಳಲ್ಲಿ ತೊಡುವ ವೇಷ ಭೂಷಣ, ಬಳಸುವ ಆಯುಧಗಳನ್ನು ಇಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಅಲ್ಲದೇ ಇಲ್ಲಿನ ಒಂದು ಕೋಷ್ಟಕದಲ್ಲಿ ಕೋಟೆ ಕಾಳಗದ ವಿವರಗಳನ್ನು ಕಂಡರಿಸಲಾಗಿದೆ. ಆದ್ದರಿಂದ ಇದು ಕೋಟೆ ಕಾಳಗದ ಸಂದರ್ಭದಲ್ಲಿ ಮಡಿದ ವೀರರ ಸ್ಮರಣಾರ್ಥವಾಗಿ ನೆಟ್ಟ ವೀರಗಲ್ಲಾಗಿದೆ ಎಂದು ಭಾವಿಸಬಹುದು. ಮಾಬಗಿ ಚಾರಿತ್ರಿಕವಾದ ‘ಯಾಣಎಪ್ಪತ್ತಳ್ಳಿ’ ಪ್ರದೇಶದಲ್ಲಿ ಸಮಾವೇಶವಾಗುತ್ತಿದ್ದು ಈ ಪ್ರದೇಶದಲ್ಲಿ ಆ ಕಾಲದಲ್ಲಿ ಒಂದು ಕೋಟೆಯಿತ್ತು ಎಂಬ ಸುಳಿವನ್ನೂ ಈ ಕಂಬ ನೀಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಕಂಬಗಳಲ್ಲಿ ದೊರೆಯುವ ಶಾಸನಗಳ ಆಧಾರದಿಂದ ನಾಗವರ್ಮರಸನ ಕಾಲವನ್ನು ಕ್ರಿ.ಶ. 1070ರಿಂದ 1113 ಎಂದು ನಿಷ್ಕರ್ಷಿಸಲಾಗಿದ್ದು, ಈಗ ದೊರೆತಿರುವ ಮಾಬಗಿಯ ಕಂಬವು ಬಡಗೇರಿ ಹಾಗೂ ಹಳದಿಪುರದ ನಾಗವರ್ಮರಸನನ್ನು ಉಲ್ಲೇಖಿಸುವ ಕಂಬಗಳ ಪ್ರತಿರೂಪದಂತಿದೆ. ಆದ್ದರಿಂದ ಮಾಬಗಿಯ ಕಂಬವೂ ಸಹ ನಾಗವರ್ಮರಸನ ಕಾಲದ್ದೇ ಆಗಿದೆ. ಇದಕ್ಕೆ ಪೂರಕವಾಗಿ ಮಾಬಗಿ ಸಮೀಪದ ಅಂಗಡಿಬೈಲಿನಲ್ಲಿ ಇದೇ ಮಾದರಿಯ ಒಂದು ಕಂಬ ಹಾಗೂ ನಾಗವರ್ಮರಸನನ್ನು ಉಲ್ಲೇಖಿಸುವ ಶಾಸನ ಶಿಲೆ ದೊರೆತಿವೆ ಎಂದು ಅವರು ವಿವರಿಸಿದ್ದಾರೆ.