ಹೊನ್ನಾವರ: ಮಂಕಿಯ ಗೋಲ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ ಶಾಲಾ ವಾರ್ಷಿಕೋತ್ಸವ ಶಾಲಾ ಆವರಣದಲ್ಲಿ ಯಶಸ್ವಿಯಾಗಿ ಸಂಪನ್ನವಾಯಿತು.
ವಾರ್ಷಿಕೋತ್ಸವ ಉದ್ಘಾಟಿಸಿದ ಚುನಾವಣಾ ಆಯೋಗದ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ಮಾತನಾಡಿ, ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ಮಾತ್ರ ಕ್ರಿಯಾಶೀಲರಾಗಿರಲು ಸಾಧ್ಯ. ಮಕ್ಕಳು ತಮಗೆ ಇಷ್ಟವಾದ ಶಿಕ್ಷಕರ ವೇಷ, ಭಾವ, ಮಾತಿನ ಶೈಲಿ ಅನುಸರಿಸುತ್ತಾರೆ. ಈ ನಿಟ್ಟಿನಲ್ಲಿ ಗಮನಿಸುವುದಾದರೆ ಈ ಶಾಲೆಯಲ್ಲಿ ಉತ್ತಮ ಶಿಕ್ಷಕ ವೃಂದದಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಉತ್ತಮ ವಾತಾವರಣದಲ್ಲಿ ಸಕಲ ವ್ಯವಸ್ಥೆ ಇರುವ ಶಾಲೆಯಾಗಿದೆ ಎಂದು ಶ್ಲಾಘಿಸಿದರು.
ಡಿಡಿಪಿಐ ಈಶ್ವರ ನಾಯ್ಕ ಮಾತನಾಡಿ, ಶಿಕ್ಷಣದ ಆಗುಹೋಗುಗಳ ಬಗ್ಗೆ ಅದರ ಅಭಿವೃದ್ಧಿ ಬಗ್ಗೆ ಅದು ಸಮಾಜಕ್ಕೆ ಎಷ್ಟು ಪೂರಕ, ಪ್ರೇರಕ ಎನ್ನುವುದರ ಬಗ್ಗೆ ಎಲ್ಲರು ಸೇರಿ ಚರ್ಚೆ ಮಾಡಬೇಕು ಎನ್ನುವ ದ್ರಷ್ಟಿಯಿಂದ ನಮ್ಮ ಇಲಾಖೆಯಿಂದ ಕಲಿಕಾ ಹಬ್ಬ ಮಾಡಲು ಆರಂಭಿಸಿದ್ದೇವೆ. ಆದರೆ ಇಲಾಖೆ ಮಾಡಬೇಕಾದ ಕಾರ್ಯಕ್ರಮ ಈ ಶಾಲೆಯಲ್ಲಿ ಆಯೋಜನೆಯಾಗಿದೆ ಎನ್ನಲು ಸಂತೋಷವಾಗುತ್ತದೆ. ಕಲಿಕಾ ಹಬ್ಬದ ವಾತಾವರಣವೇ ಇಲ್ಲಿ ಸೃಷ್ಟಿಯಾಗಿದೆ.ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಬೇಕು. ಇದು ಶಾಲೆಗಳ ಮುಖ್ಯ ಆಶಯವಾಗಿದೆ.ಶಿಕ್ಷಣವೇ ದೇಶ ಮುನ್ನಡೆಸಲು ಇರುವ ಮಾರ್ಗ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ಇಂದು ಶಿಸ್ತು, ಪ್ರಾಮಾಣಿಕತೆ ಗುರುಹಿರಿಯರಿಗೆ ಗೌರವವನ್ನ ಕೊಡುವಂತಹ ಅಭ್ಯಾಸಗಳು ಕಡಿಮೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನ ಕಲಿಸುವಂತದ್ದು ಮಹತ್ವದಾಗಿದೆ.ಈ ನಿಟ್ಟಿನಲ್ಲಿ ಉತ್ತಮವಾದಂತ ಕೆಲಸವನ್ನ ಈ ಒಂದು ಶಾಲೆಯಲ್ಲಿ ಮಾಡುತ್ತಿದ್ದಾರೆ. ಮಂಕಿಯ ಸುತ್ತಮುತ್ತಲಿನ ಜನ ಸಂಸ್ಥೆಯ ಮುಖ್ಯಸ್ಥ ಅಣ್ಣಪ್ಪ ನಾಯ್ಕರ ಮೇಲೆ ತುಂಬಾ ವಿಶ್ವಾಸವನ್ನ ಇಟ್ಟಿದ್ದಾರೆ. ಬಾಲ್ಯದಲ್ಲಿ ತನಗೆ ಗುಣಮಟ್ಟದ ಶಿಕ್ಷಣದಿಂದ ತಾನು ವಂಚಿತನಾಗಿರುವುದರಿಂದ ನಮ್ಮ ಭಾಗದ ವಿದ್ಯಾರ್ಥಿಗಳು ಅಂತ ಅವಕಾಶವನ್ನ ಕಳೆದುಕೊಳ್ಳಬಾರದು ಅನ್ನುವಂತಹ ಉದ್ದೇಶದಿಂದ ಈ ಒಂದು ಶಾಲೆಯನ್ನ ಅವರು ಪ್ರಾರಂಭಿಸಿದ್ದಾರೆ. ತುಂಬಾ ಕಡಿಮೆಯಾದಂತೆ ಶುಲ್ಕವನ್ನ ತೆಗೆದುಕೊಂಡು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿವಿಧ ಸ್ಪರ್ಧೆಯಲ್ಲಿ ವಿಜೇತ ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ಅಧ್ಯಕ್ಷ ಎ.ಆರ್.ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಇಒ ಸುರೇಶ್ ನಾಯ್ಕ, ಬಸವರಾಜ್, ನಿರ್ದೇಶಕಿ ದೀಪಾ ರಾವ್, ಪ್ರಾಂಶುಪಾಲ ರಮೇಶ್ ಯರಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಚಿಣ್ಣರು ವಿವಿಧ ನೃತ್ಯಗಳ ಮುಖಾಂತರ ಭೂ ತಾಯಿ ಉಳಿಸಿ ಎಂಬ ಸಂದೇಶವನ್ನು ನೀಡಿದರು. ದೈವ ರಕ್ಷಣೆಯ ಸಂದೇಶವನ್ನು ಸಾರುವ ಪ್ರಸಿದ್ಧ ಕಾಂತಾರ ನೃತ್ಯವನ್ನು ವಿಭಿನ್ನವಾಗಿ ಪ್ರದರ್ಶಿಸಲಾಯಿತು. ನುರಿತ ಕಲಾವಿದರಿಂದ ನೃತ್ಯ ಸಂಯೋಜನೆಯನ್ನು ಮಾಡಿಸಲಾಗಿತ್ತು. ಸುಮಾರು 615ಕ್ಕೂ ಹೆಚ್ಚು ಮಕ್ಕಳು ವಿಶೇಷವಾಗಿ ಪ್ರದರ್ಶನ ನೀಡಿದರು.
ಗೋಲ್ ಶಾಲೆಯಲ್ಲಿ ಅದ್ಧೂರಿ ವಾರ್ಷಿಕೋತ್ಸವ
